ಶಿವಮೊಗ್ಗ: ನಿಶ್ಚಿತಾರ್ಥವಾಗಿದ್ದ ಹುಡುಗ ಬಂದು ಮದುವೆಯಾಗು ಎಂದು ಪೀಡಿಸಿದ್ದರಿಂದ ವಿಷ ಸೇವಿಸಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಹೊರ ವಲಯದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ ಸುಮ (22) ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.
ಸುಮ ಅವರಿಗೆ ನಿರ್ಮಲ ಅವರ ನಾದಿನಿ ಮಗ ಪ್ರವೀಣ್ ಎಂಬಾತನೊಂದಿಗೆ ಕಳೆದ ಮೂರು ವರ್ಷದ ಹಿಂದೆ ನಿಶ್ಚಿತಾರ್ಥವಾಗಿತ್ತು. ಈ ವೇಳೆ ಯುವತಿ ತಾನು ಓದಬೇಕು, ವಿದ್ಯಾಭ್ಯಾಸ ಮುಗಿದ ಮೇಲೆ ಮದುವೆಯಾಗುತ್ತೇನೆ ಎಂದು ಹೇಳಿದ್ದಳು. ಇದಕ್ಕೆ ಪ್ರವೀಣ ಹಾಗೂ ಇಬ್ಬರ ಮನೆಯವರು ಒಪ್ಪಿದ್ದರು. ಈ ನಡುವೆ ಪದವಿ ಮುಗಿಸಿದ ಸುಮ, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂಸಿಎಗೆ ಪ್ರವೇಶಾತಿ ಪಡೆದುಕೊಂಡು ಮತ್ತೆ ಓದಲು ಹೋಗುವುದಾಗಿ ತಿಳಿಸಿದ್ದಾಳೆ.
ಆಕೆ ಮತ್ತೆ ಓದಲು ಹೋದ್ರೆ ತನ್ನ ಮದುವೆ ಇನ್ನೂ ಮುಂದಕ್ಕೆ ಹೋಗುತ್ತದೆ ಎಂದು ಆರಿತ ಪ್ರವೀಣ, ತನ್ನ ಕುಟುಂಬಸ್ಥರ ಜೊತೆ ಬಂದು ಸುಮ ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಅಲ್ಲದೇ, ಸುಮ ಹಾಗೂ ಅವರ ತಾಯಿ ಮೇಲೆ ಹಲ್ಲೆ ನಡೆಸಿ ಮದುವೆ ಮಾಡುವಂತೆ ಒತ್ತಾಯ ಮಾಡಿ, ಅಶ್ಲೀಲ ಪದಗಳಿಂದ ಬೈದು ವಾಪಸ್ ಹೋಗಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಸುಮ ರೂಮ್ಗೆ ಹೋಗಿ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ನಗರದ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎರಡು ದಿನ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ನಿರ್ಮಲರ ಸಾಕು ಮಗಳು ಸುಮ: ಸುಮ ಬೊಮ್ಮನಕಟ್ಟೆಯ ನಿವಾಸಿ ನಿರ್ಮಲ ಬಾಯಿ ಅವರ ಸಾಕು ಮಗಳು. ನಿರ್ಮಲ ಅವರ ಪತಿ ತೀರಿಕೊಂಡಿದ್ದಾರೆ. ನಿರ್ಮಲ ದಂಪತಿಗೆ ಜನಿಸಿದ ಮಗು ಸಾವನ್ನಪ್ಪಿದ ನಂತರ ತಮ್ಮ ತಂಗಿ ಮಗಳಾದ ಸುಮಳನ್ನು 6 ತಿಂಗಳಿದ್ದಾಗಲೇ ಕರೆದುಕೊಂಡು ಬಂದು ಸಾಕಲು ಪ್ರಾರಂಭಿಸಿದ್ದರು. ನಿರ್ಮಲ ಪತಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಅಕಾಲಿಕವಾಗಿ ಮರಣ ಹೊಂದಿದಾಗ ಅನುಕಂಪದ ಆಧಾರದ ಮೇಲೆ ನಗರದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಡಿ ಗ್ರೂಪ್ ನೌಕರರಾಗಿ ನಿರ್ಮಲ ಸೇವೆ ಸಲ್ಲಿಸುತ್ತಿದ್ದಾರೆ. ನಿರ್ಮಲ ಕೆಲಸಕ್ಕೆಂದು ಸಾಗರದಲ್ಲಿದ್ದಾಗ ಸಾಗರದ ಮನೆಗೆ ಪ್ರವೀಣ್ ಹೋಗುತ್ತಿದ್ದನು. ಈತ ಸೊರಬದಲ್ಲಿ ಡಿಪ್ಲೋಮಾ ಮಾಡಿಕೊಂಡಿದ್ದನು. ಹೀಗೆ, ಮನೆಗೆ ಬಂದು ಹೋಗುತ್ತಿದ್ದ ಪ್ರವೀಣ್ ಸುಮ ನಡುವೆ ಪ್ರೇಮ ಚಿಗುರೊಡೆದಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗಂಡನ ಮನೆಯವರಿಂದ ಕಿರುಕುಳ ಆರೋಪ: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ
'ನನ್ನ ನಾದಿನಿ ಮಗ ನನಗೂ ಮಗನಿದ್ದಂತೆ. ಸುಮ ಮದುವೆಯಾದ್ರೆ ಮಗ ಹಾಗೂ ಮಗಳು ನನ್ನ ಕಣ್ಣ ಮುಂದೆಯೇ ಇರುತ್ತಾರೆ ಎಂದು ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದರೆ ಈಗ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಬೇಕೆಂದು' ನಿರ್ಮಲ ಬಾಯಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತವರಿಗೆ ಹೋಗುತ್ತೇನೆ ಎಂದ ಪತ್ನಿ ಕೊಂದ ಪತಿ: ನಂತರ ಆತ್ಮಹತ್ಯೆಗೆ ಶರಣು
ಕಾಲೇಜ್ ಬಳಿ ಹೋಗಿ ಗಲಾಟೆ ಮಾಡಿದ್ದ ಪ್ರವೀಣ: 'ಸುಮ ಪದವಿ ಕಾಲೇಜಿಗೆ ಸೇರಿಕೊಂಡಾಗ ಆಕೆಯ ಕಾಲೇಜು ಬಳಿ ಹೋಗಿ ಈ ಹಿಂದೆ ಪ್ರವೀಣ ಗಲಾಟೆ ಮಾಡಿದ್ದ. ಮೊನ್ನೆ ಸಹ ಮದುವೆ ಮಾಡಿಕೊಡುವಂತೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ಜೊತೆಗೆ ನಿರ್ಮಲ ಹಾಗೂ ಸುಮನ ಮೇಲೆ ಹಲ್ಲೆ ನಡೆಸಿದ್ದ. ಸುಮ ತಾನು ಸ್ನಾತ್ತಕೋತ್ತರ ಪದವಿ ಮುಗಿಸಿದ ಮೇಲೆ ಮದುವೆಯಾಗುವುದಾಗಿ ಹೇಳಿದ್ರು ಸಹ ಕೇಳದೆ ಈಗಲೇ ಮದುವೆ ಮಾಡಿಕೊಡಬೇಕು, ಇಲ್ಲದಿದ್ದರೆ ನಾವು ಜೊತೆಗಿರುವ ಫೋಟೋವನ್ನು ವೈರಲ್ ಮಾಡುವುದಾಗಿ ಬೆದರಿದ್ದಾನೆ. ಇದರಿಂದ ಮನನೊಂದ ಆಕೆ ಮನೆಯ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣರಾದ ಪ್ರವೀಣ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಕನಹಳ್ಳಿ ಗ್ರಾಮದವನು. ಈಗಾಗಲೇ ಪ್ರವೀಣ ಸೇರಿದಂತೆ ಆತನ ತಂದೆ ಚಂದ್ರಾ ನಾಯ್ಕ, ತಾಯಿ ಮಂಜುಳಾ ದೇವಿ ಆತನ ತಂಗಿ ಸಂಧ್ಯಾ, ತಮ್ಮ ಪೃಥ್ವಿ ವಿರುದ್ಧ ದೂರು ದಾಖಲಾಗಿದ್ರು ಇನ್ನೂ ಬಂಧಿಸಿಲ್ಲ. ತಕ್ಷಣ ಅವರನ್ನು ಬಂಧಿಸಬೇಕೆಂದು' ಸುಮ ಅವರ ಭಾವ ಚಂದ್ರಾ ನಾಯ್ಕ ಪೊಲೀಸರಿಗೆ ಒತ್ತಾಯಿಸಿದ್ದಾರೆ.