ಶಿವಮೊಗ್ಗ: ಖಾಸಗಿ ಬಸ್ಗೆ ಕಾರು ಡಿಕ್ಕಿಯಾದ ಪರಿಣಾಮ ಮುಂದಿನ ವಾರ ಮದುವೆಯಾಗಬೇಕಿದ್ದ ಯುವಕನೊಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಶಿವಮೊಗ್ಗದ ಕುಂಚೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಶಿಕಾರಿಪುರದ ನಿವಾಸಿ ರಾಕೇಶ್(30) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಓವರ್ ಟೇಕ್ ಮಾಡಲು ಹೋಗಿ ಕಾರು ಬಸ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡಿದ್ದ ರಾಕೇಶ ಮೃತಪಟ್ಟಿದ್ದಾನೆ. ಕಳೆದ ತಿಂಗಳು ಜ್ಯೋತಿ ಎಂಬಾಕೆಯೊಂದಿಗೆ ರಾಕೇಶನ ವಿವಾಹ ನಿಶ್ಚಯವಾಗಿತ್ತು. ಮುಂದಿನ ವಾರ ಮದುವೆ ಮಾಡುವುದಾಗಿ ಮಾತುಕತೆಯಾಗಿತ್ತು. ಅಷ್ಟರಲ್ಲಿ ಜವರಾಯನ ಅಟ್ಟಹಾಸಕ್ಕೆ ಹಸೆಮಣೆ ಏರಬೇಕಾದವ ಮಸಣ ಸೇರಿದ್ದಾನೆ.
ಶಾಪಿಂಗ್ ಹಾಗೂ ಸಂಬಂಧಿಕರಿಗೆ ಲಗ್ನ ಪತ್ರಿಕೆ ನೀಡಲೆಂದು ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ, ತನ್ನ ಮುಂದೆ ಹೋಗುತ್ತಿದ್ದ ಬಸ್ ಹಿಂದೆ ಹಾಕಲು ಹೋಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ಕಾರು ಚಲಾಯಿಸುತ್ತಿದ್ದ ರಾಕೇಶ್ ಡಿಕ್ಕಿಯಿಂದ ತೀವ್ರ ಗಾಯಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಗಾಯಗೊಂಡ ಚೈತ್ರ ಹಾಗೂ ಜ್ಯೋತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.