ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಏಪ್ರಿಲ್ 26ರಂದು ವಿವಿಧ ಭಾಗಗಳ 110 ದೇವಸ್ಥಾನಗಳಲ್ಲಿ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯು 'ಎ' ಮತ್ತು 'ಬಿ' ಶ್ರೇಣಿಯ ದೇವಾಲಯಗಳ ಆದಾಯವನ್ನು ಬಳಸಿಕೊಂಡು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸರಳ ಸಾಮೂಹಿಕ ವಿವಾಹ ನಡೆಸಲಾಗುವುದು ಎಂದು ತಿಳಿಸಿದರು.
ಸಾಮೂಹಿಕ ವಿವಾಹಕ್ಕೆ ಜಾತಿ, ಧರ್ಮ, ಮತ ಭಾಷೆ ಬಣ್ಣಗಳಂತಹ ಎಲ್ಲೆಗಳೆಲ್ಲವನ್ನೂ ಮೀರಿ ಎಲ್ಲಾ ಧರ್ಮದವರಿಗೂ ಅವಕಾಶ ಕಲ್ಪಿಸಲಾಗುವುದು. ಸರಳವಾಗಿ ಮದುವೆಯಾಗಬೇಕೆಂಬ ಆಸೆಯ ಹೊಂದಿರುವವರಿಗೆ ಇದು ಸಹಕಾರಿಯಾಗಲಿದೆ. ಮದುವೆ ಸಂದರ್ಭದಲ್ಲಿ ವಧುವಿಗೆ 40,000 ರೂ. ಮೌಲ್ಯದ ಮಾಂಗಲ್ಯ ಸರ ಹಾಗೂ 10,000 ನಗದು ಮತ್ತು ವರನಿಗೆ 5,000 ರೂ. ಜತೆಗೆ 55,000 ರೂ. ಆರ್ಥಿಕ ನೆರವು ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಕೆ.ಬಿ. ಅಶೋಕ ನಾಯ್ಕ್, ಉಪಮೇಯರ್ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.