ಶಿವಮೊಗ್ಗ: ರಾಜರ ಕಾಲದಲ್ಲಿ ನಡೆಯುತ್ತಿದ್ದ ಯುದ್ಧದಲ್ಲಿ ಹೋರಾಡಿ, ವೀರ ಮರಣ ಹೊಂದಿದ ವೀರನ ನೆನಪಿಗೆ ರಾಜರು ವೀರಗಲ್ಲುಗಳನ್ನು ಸ್ಥಾಪಿಸುತ್ತಿದ್ದರು. ಇವುಗಳನ್ನು ಇಂದಿಗೂ ಗ್ರಾಮಗಳಲ್ಲಿ ಗಡಿಗಲ್ಲು, ವೀರನ ಕಲ್ಲು ಅಂತ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ವೀರನ ಜೊತೆಗೆ ರಾಜನ ಇತಿಹಾಸವನ್ನು ಸಹ ಇವು ತಿಳಿಸುತ್ತವೆ. ಅದೇ ರೀತಿ ಶಿವಮೊಗ್ಗದ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ವೀರ ಮಹಿಳೆಯ ವೀರಗಲ್ಲೊಂದು ಪತ್ತೆಯಾಗಿದ್ದು, ಇದು ಮಹಿಳೆಯ ವೀರತನವನ್ನು ಜಗತ್ತಿಗೆ ಸಾರುತ್ತಿದೆ.
ಮಹಿಳೆಯ ವೀರಗಲ್ಲು ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ವೀರಗಲ್ಲು ಎಂದು ಇತಿಹಾಸ ತಿಳಿಸುತ್ತದೆ. ಈ ಮಹಿಳೆ ಮಲ್ಲಯುದ್ಧ ಮಾಡಿ ವೀರಮರಣ ಅಪ್ಪಿದಳು ಎಂದು ವೀರಗಲ್ಲಿನ ಶಾಸನ ತಿಳಿಸುತ್ತದೆ.
ಮಹಿಳೆಯ ತಂದೆ ಮಲ್ಲಯುದ್ದ ಮಾಡುವಾಗ ಮರಣವಪ್ಪುತ್ತಾನೆ. ತನ್ನ ತಂದೆಯನ್ನು ಮಲ್ಲಯುದ್ದದಲ್ಲಿ ಸೋಲಿಸಿ ಕೊಂದವನನ್ನು ಮಹಿಳೆ ಮಲ್ಲಯುದ್ದದಲ್ಲಿ ಸೋಲಿಸುತ್ತಾಳೆ. ಮಲ್ಲಯುದ್ದದಲ್ಲಿ ಸೋಲಿಸಿ ಬಳಿಕ ವೀರ ಮರಣವನ್ನಪ್ಪುತ್ತಾಳೆ. ಹೀಗೆ ಮಲ್ಲ ಯುದ್ದದಲ್ಲಿ ಮಹಿಳೆಯು ವೀರ ಮರಣವನ್ನಪ್ಪಿದ ನೆನಪಿಗಾಗಿ ಮಹಿಳೆಯ ಚಿಕ್ಕಪ್ಪ ವೀರಗಲ್ಲನ್ನು ಮಾಡಿಸಿದ್ದ ಎಂದು ಶಾಸನ ಇತಿಹಾಸವನ್ನು ಹೇಳುತ್ತದೆ.
ವೀರಗಲ್ಲಿನಲ್ಲಿ ಕೆಳಗಿನ ಮೊದಲ ಭಾಗದಲ್ಲಿ ಮಹಿಳೆ ಮಲ್ಲಯುದ್ದವನ್ನು ಆಡುತ್ತಿರುವ ಕೆತ್ತನೆ ಇದೆ. ಎರಡನೇ ಭಾಗದಲ್ಲಿ ವೀರ ಮರಣವನ್ನಪ್ಪಿದ ಮಹಿಳೆಯನ್ನು ಸ್ವರ್ಗಕ್ಕೆ ಕರೆದು ದೇವಧೂತರು ಕರೆದುಕೊಂಡು ಹೋಗುತ್ತಿರುವ ಕೆತ್ತನೆ, ಕೊನೆಯದಾಗಿ ಮಹಿಳೆ ದೇವತೆಗಳ ಸಮ್ಮುಖದಲ್ಲಿ ಸ್ವರ್ಗದಲ್ಲಿ ಇರುವ ಕೆತ್ತನೆ ಮಾಡಲಾಗಿದೆ.
ಈ ಕುರಿತು ಶಿವಮೊಗ್ಗ ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕರಾದ ಶೇಜೇಶ್ವರ್ ಅವರು ಎಲ್ಲಾ ಕಡೆ ಪುರುಷನ ವೀರಗಲ್ಲು ಇರುವುದು ಸಾಮಾನ್ಯ, ಆದ್ರೆ ಅತಿ ವಿರಳ ಎಂಬಂತೆ ಮಹಿಳೆಯ ವೀರಗಲ್ಲು ಲಭ್ಯವಾಗಿದೆ. ಇದು ವಿಜಯನಗರ ರಾಜರ ಆಳ್ವಿಕೆಯ ಕಾಲದ್ದು ಎನ್ನಲಾಗುತ್ತಿದೆ. ಮಲ್ಲಯುದ್ದದಲ್ಲಿ ಮರಣ ಹೊಂದಿದ ನೆನಪಿಗೆ ವೀರಗಲ್ಲನ್ನು ಮಾಡಿಸಲಾಗಿದೆ. ಆದ್ರೆ, ವೀರಗಲ್ಲಿನಲ್ಲಿ ಮಹಿಳೆಯು ಚಾಕುವಿನಕಾರದ ಆಯುಧವನ್ನು ಹಿಡಿದಿದ್ದಾಳೆ. ಮಲ್ಲಯುದ್ದವನ್ನು ಕಲ್ಲಿನಲ್ಲಿ ಕೆತ್ತಿದರೆ ಜನರಿಗೆ ಅಷ್ಟು ಗೂತ್ತಾಗುವುದಿಲ್ಲ ಎಂದು ಕತ್ತಿಯನ್ನು ಬಳಸಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.