ಶಿವಮೊಗ್ಗ: ನಿವೃತ್ತ ಸೈನಿಕರೊಬ್ಬರು ತಮ್ಮ ತಂದೆ-ತಾಯಿಯ ಪುಣ್ಯ ತಿಥಿಯನ್ನು ಮೂಕ ಪ್ರಾಣಿಗಳಿಗೆ ಹಿಂಡಿ-ಬೂಸಾ ಹಅಗೂ ಹಣ್ಣುಗಳನ್ನು ನೀಡುವ ಮೂಲಕ ಆಚರಿಸಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗದ ನಿವಾಸಿ ಗಂಗಾಧರ ಎಂಬುವರು ನಿವೃತ್ತ ಸೈನಿಕರಾಗಿದ್ದು, ತಮ್ಮ ಪೋಷಕರ ಪುಣ್ಯ ತಿಥಿಯಂದು ನಾಲ್ಕು ಜನಕ್ಕೆ ಊಟ ಹಾಕಿ ಸುಮ್ಮನಿರಬಹುದಾಗಿತ್ತು. ಆದ್ರೆ ಮಾತನಾಡುವ ಮನುಷ್ಯರು ತಮ್ಮ ಹೊಟ್ಟೆ ಹಸಿದರೆ ಕೇಳಿ ಊಟ ಮಾಡುತ್ತಾರೆ. ಆದ್ರೆ, ಮೂಕ ಪ್ರಾಣಿಗಳು ಏನ್ ಮಾಡುತ್ತವೆ ಎಂದು ನಗರದ ಮಹಾವೀರ ಗೋ ಶಾಲೆಗೆ ಸುಮಾರು 25 ಸಾವಿರ ರೂ. ಮೌಲ್ಯದ ಹಿಂಡಿ, ಬೂಸಾ, ಹಣ್ಣುಗಳನ್ನು ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪ ಆಗಮಿಸಿ ತಮ್ಮ ಕೈಯಿಂದ ಗೋ ಮಾತೆಗೆ ಅಕ್ಕಿ-ಬೆಲ್ಲ ನೀಡುವ ಮೂಲಕ ಚಾಲನೆ ನೀಡಿದರು. ಮಹಾವೀರ ಗೋ ಶಾಲೆಯಲ್ಲಿ ಇರುವ ಎಲ್ಲಾ ಗೋವುಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ನೀಡಿ, ಕುಟುಂಬದವರು, ಸ್ನೇಹಿತರು ಗೋವುಗಳಿಗೆ ಹಣ್ಣುಗಳನ್ನು ತಿನ್ನಿಸಿದರು.
ಮಹಾವೀರ ಗೋ ಶಾಲೆ ನಡೆಸುವುದು ಕಷ್ಟವಾಗುತ್ತಿದೆ ಎಂದು ಗೋ ಶಾಲೆ ಆಡಳಿತ ಮಂಡಳಿ ಹೇಳಿದಾಗ, ಶಾಸಕ ಈಶ್ವರಪ್ಪ ಪಶು ಸಂಗೋಪನಾ ಸಚಿವ ನಾಡಗೌಡರವರಿಗೆ ಫೋನ್ ಮಾಡಿ ಗೋ ಶಾಲೆಯ ಸಮಸ್ಯೆ ಪರಿಹರಿಸಿ ಅನುದಾನ ನೀಡಬೇಕು ಎಂದು ವಿನಂತಿ ಮಾಡಿಕೊಂಡರು.
ನಾವು ಗೋವುಗಳನ್ನು ಉಳಿಸುವ ಬಗ್ಗೆ ಮಾತನಾಡದೆ ಅವುಗಳಿಗಾಗಿ ಏನಾದ್ರೂ ಮಾಡಬೇಕು ಅಂತ ನಮ್ಮ ಪೋಷಕರ ನೆನಪಿಗಾಗಿ ಆಹಾರ ನೀಡುತ್ತಿದ್ದೇವೆ ಎಂದು ಗಂಗಾಧರ ತಮ್ಮ ಅಭಿಪ್ರಾಯ ಹಂಚಿಕೊಂಡರು.