ಶಿವಮೊಗ್ಗ: ಇನ್ನೇನು ಹಾವೊಂದು ಮಾಲೀಕನಿಗೆ ಕಚ್ಚಿಬಿಡುತ್ತದೆ ಎನ್ನುವಷ್ಟರಲ್ಲಿ ಸಾಕು ನಾಯಿ ಆತನನ್ನ ಕಾಪಾಡಿ ಕೊನೆಗೆ ತಾನೇ ಬಲಿಯಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದ ಶೇಖಪ್ಪ ಎಂಬ ವ್ಯಕ್ತಿ ಅಂತರಗಂಗೆ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವಾಗ ಹಾವೊಂದು ಕಚ್ಚಲು ಯತ್ನಿಸಿದೆ.
ಇದನ್ನ ಗಮನಿಸಿದ ನಾಯಿ ಅರೆ ಕ್ಷಣದಲ್ಲಿ ಹಾವನ್ನು ಕಚ್ಚಿ ಎಳೆದೊಯ್ದು ಮಾಲೀಕನನ್ನ ಸಾವಿನ ದವಡೆಯಿಂದ ರಕ್ಷಣೆ ಮಾಡಿದೆ. ಇನ್ನೇನು ತನ್ನ ಜೀವ ಕಾಪಾಡಿದ ನಾಯಿ ಕಡೆ ಮಾಲೀಕ ಧನ್ಯತೆಯ ಕುಡಿನೋಟ ಬೀರುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮಾಲೀಕನಿಗೆ ಕಚ್ಚಬೇಕಿದ್ದ ಹಾವು ತನ್ನ ವಿಷದ ಹಲ್ಲನ್ನು ನಾಯಿಯ ದೇಹಕ್ಕೆ ನಾಟಿಸಿತ್ತು.
ಕೆಲ ಕಾಲ ಅಲ್ಲೇ ಒದ್ದಾಡಿದ ನಾಯಿ ಅಸುನೀಗಿದೆ. ಅನ್ನ ಹಾಕಿದ ಮಾಲೀಕನ ಪ್ರಾಣ ಕಾಪಾಡುವ ಮೂಲಕ ತನ್ನ ಋಣ ತೀರಿಸಿ ಇಹಲೋಕ ತ್ಯಜಿಸಿದೆ.