ಶಿವಮೊಗ್ಗ: ಯಾವುದೇ ಪ್ರಾಣಿಯು ಒಂದು ಬಾರಿಗೆ ಒಟ್ಟಿಗೆ ಮರಿಯನ್ನು ಹಾಕುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಎಮ್ಮೆ ಅಚ್ಚರಿ ಎಂಬಂತೆ ವಾರದ ಅಂತರದಲ್ಲಿ ಎರಡು ಕರುವಿಗೆ ಜನ್ಮ ನೀಡಿದೆ. ಸಾಗರ ತಾಲೂಕಿನ ನಾಡಕಲಸಿ ಗ್ರಾಮದ ದುರ್ಗಪ್ಪ ಎಂಬುವರ ಮನೆಯ ಎಮ್ಮೆ ಒಂದು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ.
ಎಮ್ಮೆಗಳಲ್ಲಿ ಇಂತಹ ಪ್ರಕರಣ ತುಂಬಾ ಅಪರೂಪವಾಗಿದೆ. ಈ ಎಮ್ಮೆ ಸೆಪ್ಟೆಂಬರ್ 13 ರಂದು ಒಂದು ಗಂಡು ಕರು ಜನ್ಮ ನೀಡಿತ್ತು. ನಂತರ ಅದನ್ನು ಮೇಯಲು ಕಾಡಿಗೆ ಬಿಟ್ಟಿದ್ದು, ಸೆಪ್ಟೆಂಬರ್ 19ರಂದು ಮತ್ತೊಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ ಎಂದು ತಿಳಿದು ಬಂದಿದೆ.
ಪಶು ವೈದ್ಯ ವಿಜ್ಞಾನದಲ್ಲಿ ಇಂತಹ ಪ್ರಕರಣ ಅಪರೂಪದಲ್ಲಿ ಅಪರೂಪವಾಗಿದೆ. ಬಹುಶಃ ಮೊದಲು ಬೆದೆಗೆ ಬಂದಾಗ ಕೋಣನ ಸಂಪರ್ಕಕ್ಕೆ ಬಂದು ಗರ್ಭಿಣಿಯಾಗಿರುತ್ತದೆ. ನಂತರ ಮತ್ತೊಂದು ಕೋಣನ ಜೊತೆ ಸಂಪರ್ಕ ಮಾಡಿದಾಗ ಮತ್ತೊಂದು ಭ್ರೂಣ ಬೆಳೆದಿರಬಹುದು ಎಂದು ಇಲಾಖೆಯ ಪಶು ಪರೀಕ್ಷಿಸಿ ಲಕ್ಷ್ಮಿ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ. ಎಮ್ಮೆಯ ಎರಡು ಕರುಗಳು ಬಿಳಿ ಬಣ್ಣದಾಗಿದ್ದು, ಎರಡೂ ಕರುಗಳು ಆರೋಗ್ಯವಾಗಿವೆ. ಎಮ್ಮೆ ಹಾಗೂ ಕರುಗಳನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ : ಉಡುಪಿ: ಮಲ್ಪೆ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು!