ಶಿವಮೊಗ್ಗ: ಮಲೆನಾಡಿನ ಪೋರನೊಬ್ಬ 16 ವರ್ಷದ ವಯೋಮಿತಿ ಒಳಗಿನ 50 ಓವರ್ ಕ್ರಿಕೆಟ್ನಲ್ಲಿ 407 ರನ್ ಬಾರಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಶಿವಮೊಗ್ಗ ಹೊರ ವಲಯದ ಪೆಸೆಟ್ ಕಾಲೇಜು ಮೈದಾನದಲ್ಲಿ ಕೆಎಸ್ಸಿಎ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಲಕ ಈ ಸಾಧನೆ ಮಾಡಿದ್ದಾರೆ.
16 ವರ್ಷದೊಳಗಿನ ಕ್ರಿಕೆಟ್ ಲೀಗ್ನಲ್ಲಿ ಎನ್.ಟಿ.ಪಿ.ಸಿ ಭದ್ರಾವತಿ ಹಾಗೂ ಸಾಗರ ಕ್ರಿಕೆಟ್ ಕ್ಲಬ್ ಮಧ್ಯೆ ಇಂದು ಪಂದ್ಯ ಆಯೋಜಿಸಲಾಗಿತ್ತು. ಮೊದಲು ಬ್ಯಾಟಿಂಗ್ ಆರಂಭಿಸಿದ ಸಾಗರ ತಂಡ 50 ಓವರ್ಗಳಲ್ಲಿ 583 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ತನ್ಮಯ್ ಮಂಜುನಾಥ್ ಎಂಬ ಕೇವಲ 165 ಬಾಲ್ನಲ್ಲಿ 407 ರನ್ ಬಾರಿಸಿದ್ದಾರೆ. ಇದರಲ್ಲಿ 48 ಫೋರ್, 24 ಸಿಕ್ಸರ್ಗಳಿವೆ. ತನ್ಮಯ್ ಜೊತೆ ಆಟವಾಡಿದ ಅಂಶು ಅವರು 120 ರನ್ ಬಾರಿಸಿದ್ದರು. ಈ ಮೂಲಕ 350 ರನ್ಗಳ ಜೊತೆಯಾಟವಾಡಿದರು.
ಇದನ್ನೂ ಓದಿ: ವೈಟ್ ಬಾಲ್ ಇತಿಹಾಸದಲ್ಲಿ ಭಾರತ ಅತ್ಯಂತ ಕಳಪೆ ಆಟವಾಡಿದ ತಂಡ: ಮೈಕಲ್ ವಾನ್ ಟೀಕೆ
ಭದ್ರಾವತಿ ತಂಡ 73 ರನ್ಗೆ ಅಲೌಟ್: ಬೃಹತ್ ಮೊತ್ತ ಬೆನ್ನತ್ತಿದ ಭದ್ರಾವತಿ ತಂಡ, ಕೇವಲ 73 ರನ್ಗಳಿಗೆ ಅಲೌಟ್ ಆಯಿತು. ಸಾಗರ ತಂಡದ ಪರವಾಗಿ ಅಂಶು 5 ವಿಕೆಟ್ ಹಾಗೂ ಅಜಿತ್ 4 ವಿಕೆಟ್ ಕಬಳಿಸಿದರು. ಈ ಮೂಲಕ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡ ಮುಂದಿನ ಹಂತಕ್ಕೆ ಎಂಟ್ರಿ ಕೊಟ್ಟಿದೆ.
ತನ್ಮಯ್ 16 ವರ್ಷ ವಯೋಮಿತಿಯ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ತನ್ಮಯ್ ಸಾಗರದ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಕ್ರಿಕೆಟ್ ಆಕಾಡೆಮಿಯ ಕೋಚ್ ನಾಗೇಂದ್ರ ಪಂಡಿತ್ ತಿಳಿಸಿದ್ದಾರೆ.
ಪ್ರತಿದಿನ ಬೆಳಗ್ಗೆ ವರ್ಕ್ಔಟ್ ಮಾಡಿ ಸಂಜೆ ಅಭ್ಯಾಸ ನಡೆಸುತ್ತಿದ್ದೇನೆ. ಈಗ ನನಗೆ ಅದು ಅನುಕೂಲಕ್ಕೆ ಬಂತು. ಇಂದಿನ ನನ್ನ ಆಟವನ್ನು ಮೆಚ್ಚಿಕೊಂಡವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತನ್ಮಯ್ ಹೇಳಿದರು.