ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ಎನ್ಐಆರ್ಎಫ್ನಿಂದ 73ನೇ ರ‍್ಯಾಂಕ್ ಪಡೆದಿದೆ. ಹಾಗೆಯೇ ರಾಜ್ಯದ ವಿವಿಗಳ ಪೈಕಿ ಮೂರನೇ ಸ್ಥಾನ ಉಳಿಸಿಕೊಂಡಿದೆ.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಡೆಸುವ ದೇಶದ ಶೈಕ್ಷಣಿಕ ಸಂಸ್ಥೆಗಳ ಶ್ರೇಷ್ಠತಾ ಶ್ರೇಯಾಂಕದಲ್ಲಿ 4,100ಕ್ಕೂ ಹೆಚ್ಚು ಸಂಸ್ಥೆಗಳನ್ನು ಪರಿಗಣಿಸಲಾಗಿದೆ. ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿವಿಯು 42.45 (ಕಳೆದ ಬಾರಿಗಿಂತ 1.85 ಹೆಚ್ಚಳ) ಅಂಕಗಳನ್ನು ಪಡೆದಿದೆ.
2017ರಲ್ಲಿ150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯವು 2018ರಲ್ಲಿ ಬಾರಿ ಜಿಗಿತ ಕಂಡು 78ನೇ ಸ್ಥಾನಕ್ಕೇರಿತ್ತು. 2019ರಲ್ಲಿ ಮತ್ತೆ 5 ಸ್ಥಾನ ಮೇಲೇರಿ 73ನೇ ಸ್ಥಾನಕ್ಕೆ ತಲುಪಿತ್ತು. ಪ್ರಸ್ತುತ ಸಾಲಿನಲ್ಲಿ 1.85 ಅಂಕ ವೃದ್ಧಿಸಿಕೊಂಡು, ಸ್ಥಾನದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಕ್ರಮವಾಗಿ 27 ಮತ್ತು 68ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆದಿವೆ.
ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟ ಉತ್ತಮಪಡಿಸಲು ಮತ್ತು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಎನ್‍ಐಆರ್‍ಎಫ್ ರ‍್ಯಾಂಕಿಂಗ್ ಪ್ರಾರಂಭಿಸಿದ್ದು, ಈಗ ಐದನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
ಕುವೆಂಪು ವಿಶ್ವವಿದ್ಯಾಲಯದ ಸಾಧನೆಗೆ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಹಾಗೂ ಕುಲ ಸಚಿವ ಎಸ್.ಎಸ್. ಪಾಟೀಲ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.