ಶಿವಮೊಗ್ಗ: ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿರುವುದಲ್ಲದೆ, ಮೂಕ ಪ್ರಾಣಿಗಳಿಗೂ ಕಂಟಕವಾಗುತ್ತಿದೆ. ಹಸುವಿನ ಹೊಟ್ಟೆಯಲ್ಲಿ 50 ಕೆ.ಜಿಗೂ ಹೆಚ್ಚು ಕೆ.ಜಿ ಪ್ಲಾಸ್ಟಿಕ್ ಪತ್ತೆಯಾದ ಆತಂಕಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಸದಾನಂದ ಎಂಬುವರ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ಹಸು ಅತಿಯಾದ ಹೊಟ್ಟೆ ಉಬ್ಬರ, ನಿಶ್ಯಕ್ತಿಯಿಂದ ಬಳಲುತ್ತಿತ್ತು, ಅಲ್ಲದೆ ತಿಂದ ಆಹಾರವು ಅದರ ಮೂಗಿನಿಂದ ಹೊರಬರಲಾರಂಭಿಸಿತ್ತು. ಇದನ್ನು ಗಮನಿಸಿದ ಪ್ರಾಣಿ ದಯಾ ಸಂಘದ ಸದಸ್ಯರು ಹಸುವಿನ ಮಾಲೀಕರ ಮನವೊಲಿಸಿ ತೀರ್ಥಹಳ್ಳಿ ಪಶು ವೈದ್ಯ ಡಾ.ಯುವರಾಜ ಹೆಗಡೆ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯರು ಹಸುವನ್ನು ಪರೀಕ್ಷಿಸಿ ಅದು ತಿಂದ ವಸ್ತುಗಳು ಹೊಟ್ಟೆಯಲ್ಲಿ ಹಾಗೆಯೇ ಉಳಿದುಕೊಂಡಿರುವುದರಿಂದ ಅಜೀರ್ಣವಾಗುತ್ತದೆ ಎಂದು ತಕ್ಷಣ 'ರುಮಿನಾಟಮಿ' ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈ ವೇಳೆ ಹಸುವಿನ ಹೊಟ್ಟೆಯಲ್ಲಿದ್ದ ಸುಮಾರು 50 ಕೆ. ಜಿ.ಗಳಷ್ಟು ಪ್ಲಾಸ್ಟಿಕ್ ಹೊರ ತೆಗೆಯಲಾಗಿದೆ.
![plastic found in stomach of a cow in shivamogga, ಶಿವಮೊಗ್ಗ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆ](https://etvbharatimages.akamaized.net/etvbharat/prod-images/kn-smg-05-cow-plastic-7204213_20112019180813_2011f_1574253493_255.jpg)
ಜಾನುವಾರಗಳ ಉದರದಲ್ಲಿ ನಾಲ್ಕು ಪ್ರಮುಖ ಭಾಗಗಳಿದ್ದು, ಪ್ಲಾಸ್ಟಿಕ್ನಂತಹ ಘನ ತ್ಯಾಜ್ಯವು ಮೊದಲ ಭಾಗವಾದ ರುಮೆನ್ನಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ಅದು ಜೀರ್ಣವಾಗದೆ ಹಲವಾರು ವರ್ಷಗಳವರೆಗೆ ಉಳಿದು ಜೀರ್ಣಕ್ರಿಯೆಯಲ್ಲಿ ಅಡಚಣೆ, ನಂಜು, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಹಸು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದುತ್ತವೆ ಎಂದು ವೈದ್ಯ ಡಾ.ಯುವರಾಜ ಹೆಗಡೆ ಹೇಳಿದರು.
![ಶಿವಮೊಗ್ಗ ಹಸುವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆ, plastic found in stomach of a cow in shivamogga](https://etvbharatimages.akamaized.net/etvbharat/prod-images/kn-smg-05-cow-plastic-7204213_20112019180813_2011f_1574253493_433.jpg)
ಸಾರ್ವಜನಿಕರು ತಾವು ತಿಂದುಳಿದ ಆಹಾರವನ್ನು ಪ್ಲಾಸ್ಟಿಕ್ನಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುತ್ತಿರುವುದು ಹಾಗೂ ಪ್ಲಾಸ್ಟಿಕ್ನ ಅತಿಯಾದ ಬಳಕೆಯು ಇಂತಹ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ಮೂಕ ಪ್ರಾಣಿಗಳ ಜೀವಕ್ಕೆ ಎರವಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಪ್ರಾಣಿದಯಾ ಸಂಘದ ಸದಸ್ಯರು ಆಗ್ರಹಿಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಪ್ರಾಣಿದಯಾ ಸಂಘದ ಸದಸ್ಯರಾದ ಪೌಲ್, ರಾಘವೇಂದ್ರ , ಪ್ರವೀಣ್, ಅನಂತಮೂರ್ತಿ, ವಿಕ್ಕಿ ಶೆಟ್ಟಿ, ರಾಘವ ,ವಿಘ್ನೇಷ್ ನಾಯಕ್ ಮತ್ತಿತರು ಸಹಕರಿಸಿದರು.