ಶಿವಮೊಗ್ಗ: ಕಳೆದ ವರ್ಷ ಮಲೆನಾಡು ಜಿಲ್ಲೆಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಇಡೀ ಮಲೆನಾಡು ಭಾಗವನ್ನೇ ತಲ್ಲಣಗೊಳಿಸುವುದರ ಜತೆಗೆ ಹತ್ತಾರು ಮಂದಿಯನ್ನು ಬಲಿ ಪಡೆದಿತ್ತು. ಈ ಬಾರಿ ಮಹಾಮಾರಿ ಕೋವಿಡ್ ನಡುವೆ ಈ ರೋಗದ ಅಬ್ಬರ ಹೆಚ್ಚಿದರೂ ಆಶ್ಚರ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆರಂಭದಿಂದಲೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರ ಪರಿಣಾಮವಾಗಿ ಈ ಬಾರಿ ಮಂಗನಕಾಯಿಲೆಯ ಅಬ್ಬರ ಅಷ್ಟಾಗಿ ಕಂಡುಬಂದಿಲ್ಲ.
ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ಡಿಯ ಎರಡು ಪ್ರಕರಣಗಳು ಮಾತ್ರ ಕಂಡುಬಂದಿದ್ದು, ಇಡೀ ರಾಜ್ಯದಲ್ಲಿ ಕೇವಲ ನಾಲ್ಕು ಮಂದಿಯಲ್ಲಿ ಮಾತ್ರ ಮಂಗನಕಾಯಿಲೆ ಕಾಣಿಸಿಕೊಂಡ ಪರಿಣಾಮ ಕೊಂಚ ನಿರಾಳ ಎನಿಸಿದೆ.
ಶಿವಮೊಗ್ಗ ಜಿಲ್ಲೆಯ ಇಬ್ಬರಲ್ಲಿ ಕೆಎಫ್ಡಿ ಸೋಂಕು
ತೀರ್ಥಹಳ್ಳಿ ತಾಲೂಕಿನ ಕಟ್ಟಹಕ್ಕಲು ಬಳಿಯ ಶಿರೂರು ಮಸ್ಕಿ ಗ್ರಾಮದ ಮಹಿಳೆ ಹಾಗೂ ಬಿಆರ್ಪಿ ಸಮೀಪದ ಲಕ್ಕವಳ್ಳಿಯ ಪುರುಷನಲ್ಲಿ ಕೆಎಫ್ಡಿ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ನಾಲ್ವರಿಗೆ ಸೋಂಕು
ಈ ಬಾರಿ 2,200ಕ್ಕೂ ಹೆಚ್ಚು ಜನರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದ್ದು, ಶಿವಮೊಗ್ಗದ ಇಬ್ಬರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಇಬ್ಬರಲ್ಲಿ ಮಾತ್ರ ಕೆಎಫ್ಡಿ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ ಜಿಲ್ಲೆಯ ಯಾವುದೇ ಪ್ರದೇಶಗಳಲ್ಲಿಯೂ ಮಂಗನಕಾಯಿಲೆ ಕಾಣಿಸಿಕೊಂಡಿಲ್ಲ.
ಸ್ವಯಂಪ್ರೇರಿತರಾಗಿ ಮುನ್ನೆಚ್ಚರಿಕೆ ವಹಿಸಿದ ಜನತೆ
ಮಂಗನ ಕಾಯಿಲೆ ಬಂತೆಂದರೆ ಸಾಕು ಸಾಗರ, ತೀರ್ಥಹಳ್ಳಿ ಹಾಗು ಹೊಸನಗರ ತಾಲೂಕಿನ ಜನತೆ ಅಕ್ಷರಶಃ ನಲುಗಿ ಹೋಗುತ್ತಿದ್ದರು. ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅದರಲ್ಲೂ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಈ ಮಹಾಮಾರಿ ಮರಣ ಮೃದಂಗವನ್ನೇ ಬಾರಿಸಿತ್ತು. ಇದರಿಂದ ಹೆದರಿದ್ದ ಜನತೆ ಈ ಬಾರಿ ಸ್ವಯಂಪ್ರೇರಿತರಾಗಿ ಆಗಮಿಸಿ ಕೆಎಫ್ಡಿ ಲಸಿಕೆ ಪಡೆದಿದ್ದರು. ಜೊತೆಗೆ ಕಾಡಿಗೆ ಹೋಗುವಾಗ ಕಡ್ಡಾಯವಾಗಿ ಡಿಎಂಪಿ ಎಣ್ಣೆಯನ್ನು ಮೈಗೆ ಸವರಿಕೊಂಡು ಹೋಗುತ್ತಿದ್ದರು.
ಈಗಲೂ ಮಲೆನಾಡು ಭಾಗದಲ್ಲಿ ಡಿಎಂಪಿ ಆಯಿಲ್ಗೆ ಹೆಚ್ಚಿನ ಬೇಡಿಕೆಯಿದೆ. ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮಗಳು ಹಾಗೂ ಜನರಲ್ಲಿ ಮಹಾಮಾರಿಯ ಬಗ್ಗೆ ಇದ್ದ ಎಚ್ಚರಿಕೆಯಿಂದಾಗಿ ಈ ಬಾರಿ ಕಾಯಿಲೆಯ ಅಬ್ಬರ ತಗ್ಗಿದೆ. ಆದರೂ ಇನ್ನೂ ಆರು ವಾರಗಳ ಕಾಲ ಎಚ್ಚರಿಕೆಯಿಂದರಬೇಕಿದೆ.
ಇದನ್ನೂ ಓದಿ: ಮಲೆನಾಡಲ್ಲಿ ಮಂಗನ ಕಾಯಿಲೆ ಮಟ್ಟ.. ಸಿಹಿಮೊಗೆಯ ಜನತೆಗೆ ಸಿಹಿ ತಂದ ಶಾರ್ವರೀ ಸಂವತ್ಸರ..