ಶಿವಮೊಗ್ಗ: ನೀರಿನ ತೊಟ್ಟಿಯಲ್ಲಿ ಮುಳುಗಿ 11 ತಿಂಗಳ ಕಂದಮ್ಮ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ಮಗ ಅಕ್ಷಯ್ ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು: ಮುಂದಿನ ವಾರ ಮಗುವಿನ ಮೊದಲ ವರ್ಷದ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲು ಕುಟುಂಬಸ್ಥರು ಯೋಚಿಸಿದ್ದರು. ಆದ್ರೆ ವಿಧಿಯಾಟದಿಂದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಇಂದು ಮಹಾಲಯ ಅಮವಾಸ್ಯೆ ಕಾರಣ ಕುಟುಂಬಸ್ಥರು ವಾಹನ ತೊಳೆಯಲು ಮನೆ ಮುಂದಿನ ತೊಟ್ಟಿಯನ್ನು ತೆಗೆದಾಗ ಮಗು ನೀರಿನಲ್ಲಿ ಬಿದ್ದು ಸಾವನ್ನಪ್ಪಿದೆ.
ಮನೆಯವರು ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟಿದ್ದರಿಂದ ಅಂಬೆಗಾಲು ಇಡುತ್ತಿದ್ದ ಮಗು ಅರಿವಿಲ್ಲದಂತೆ ತೊಟ್ಟಿಗೆ ಬಿದ್ದಿದೆ. ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲು ತೊಟ್ಟಿಯಲ್ಲಿ ಬಗ್ಗಿದಾಗ ಮಗು ನೋಡಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಗು ದಾಖಲು ಮಾಡಿದರೂ ಪ್ರಯೋಜನವಾಗಿಲ್ಲ. ಇಡೀ ಊರಿಗೆ ಊರೇ ಶವಸಂಸ್ಕಾರದಲ್ಲಿ ಭಾಗಿಯಾಗಿದ್ದು, ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಸಂಪೂರ್ಣ ಮೌನ ಆವರಿಸಿದೆ.
(ಓದಿ: ಶಿವಮೊಗ್ಗ: ಜೋಳದ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಎರಡು ಕಾಡಾನೆ ಸಾವು)