ರಾಮನಗರ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಚನ್ನಪಟ್ಟಣ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ಒಬ್ಬರು. ಇದಲ್ಲದೆ ಮೈತ್ರಿ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತೆ. ಅತೃಪ್ತ ಶಾಸಕರನ್ನ ಮುಂಬೈಗೆ ಕರೆದುಕೊಂಡು ಹೋಗಿ ಮೈತ್ರಿ ಸರ್ಕಾರ ಬೀಳಿಸುವಲ್ಲಿ ಯಶಸ್ವಿ ಕೂಡ ಆಗಿದ್ರು. ನಂತರ ಬಿ.ಎಸ್.ಯಡಿಯೂರಪ್ಪ ಎರಡು ವರ್ಷಗಳ ಕಾಲ ಸಿಎಂ ಆಗುವುದಕ್ಕೆ ಸಿಪಿವೈ ಕೊಡುಗೆ ಕೂಡ ಅಪಾರವಾಗಿದೆ. ಆದ್ರೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಭಾರಿ ಕಸರತ್ತು ಮಾಡಿ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಸಹಕಾರದೊಂದಿಗೆ ಕಡೆಗೂ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಯಡಿಯೂರಪ್ಪ ವಿರುದ್ಧ ಅಸಮಾಧಾನ :
ಬಿಜೆಪಿ ಸರ್ಕಾರ ಏನೋ ರಾಜ್ಯದಲ್ಲಿ ರಚನೆಯಾದ್ರು ಕೂಡ ಇತ್ತ ಪಕ್ಷದಲ್ಲಿ ಸಿಪಿ ಯೋಗೇಶ್ವರ್ ಮಾತು ನಡೆಯುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿಪಿವೈ ಬಹಿರಂಗವಾಗಿಯೇ ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಲು ಶುರು ಮಾಡಿದ್ರು. ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಬಲಗೊಳ್ಳುತ್ತಿದೆ. ಬಿಜೆಪಿಯಿಂದ ಪಕ್ಷ ಸಂಘಟನೆ ಆಗುತ್ತಿಲ್ಲ ಎಂದು ನೇರವಾಗಿ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದರು. ಇದಲ್ಲದೆ ಯಡಿಯೂರಪ್ಪ ಮಗ ವಿಜಯೇಂದ್ರ ಕೂಡ ತಮ್ಮ ಸಚಿವ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಯಾವ ಕೆಲಸ ಮಾಡಬೇಕಿದ್ರು ಸಿಎಂ ಪುತ್ರನ ಅನುಮತಿ ಪಡೆಯಬೇಕು ಎಂದು ಅಸಮಾಧಾನಗೊಂಡ ಸಿಪಿವೈ, ದೆಹಲಿಗೆ ಹೋಗಿ ಬಿಜೆಪಿ ಹೈಕಮಾಂಡ್ಗೆ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿ ಬಿಎಸ್ವೈ ಬದಲಾವಣೆಗೆ ಒತ್ತಡ ಹೇರಿದ್ದರು ಎನ್ನಲಾಗ್ತಿದೆ.
ಸಿಪಿವೈಗೆ ಸಚಿವ ಸ್ಥಾನ ಸಿಗಲಿದೆಯೇ?
ಸಿಎಂ ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ ಸಿಪಿವೈ ಗೆ ಸಚಿವ ಸ್ಥಾನ ಸಿಗುವುದು ಅನುಮಾನ ಮೂಡಿದೆ. ಏಕೆಂದರೆ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಸಿಪಿವೈ ಗುರಿಯಾಗಿದ್ದಾರೆ. ನನ್ನ ವಿರುದ್ಧ ನೇರವಾಗಿ ಹೈಕಮಾಂಡ್ಗೆ ಸಿಪಿವೈ ದೂರು ನೀಡಿದ್ದಾರೆಂಬ ಅಸಮಾಧಾನ ಯಡಿಯೂರಪ್ಪರಿಗೆ ಅವರಿಗಿದೆ.
ಹೈಕಮಾಂಡ್ ಒಲವಿದ್ರೆ ಸಿಕ್ಕರೂ ಸಿಗಬಹುದು...!
ಒಂದು ವೇಳೆ ಬಿಜೆಪಿ ಹೈಕಮಾಂಡ್ ಒಲವಿದ್ರೆ ಈ ಬಾರಿಯೂ ಕೂಡ ಸಿಪಿವೈ ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಳೆ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ಬಿಜೆಪಿ ಸಂಘಟನೆಯ ಹೊಸ ಹೊಸ ಪ್ಲಾನ್ ಕೂಡ ಇದೆ. ಇದನ್ನ ಹೈಕಮಾಂಡ್ ಗೂ ಕೂಡ ಮನವರಿಕೆ ಮಾಡಿಕೊಡಲಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಪಕ್ಷ ಸಂಘಟನೆಯ ಉದ್ದೇಶದಿಂದ ಸಚಿವ ಸ್ಥಾನ ನೀಡಿದ್ರು ನೀಡಬಹುದು ಎಂದು ಹೇಳಲಾಗುತ್ತಿದೆ. ಇದಲ್ಲದೆ ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಬಳಿ ಸಿಪಿವೈ ಉತ್ತಮ ರಾಜಕೀಯ ಒಡನಾಟ ಇಟ್ಟುಕೊಂಡಿದ್ದಾರೆ. ಇದು ಇವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಪಡೆಯಲು ಅನುಕೂಲವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಒಂದೆಡೆ ರಾಜ್ಯ ಬಿಜೆಪಿ ಪಾರ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನೇರವಾಗಿ ಮಾತನಾಡಲು ಯಾವ ನಾಯಕರು ಇಲ್ಲ. ಆ ನಾಯಕರ ವಿರುದ್ಧ ನೇರವಾಗಿ ಮಾತನಾಡಬಲ್ಲ ನಾಯಕರೆಂದ್ರೆ ಅದು ಸಿ ಪಿ ಯೋಗೇಶ್ವರ್ ಮಾತ್ರ.
ಒಟ್ಟಾರೆ ಮಾಜಿ ಸಿಎಂ ಯಡಿಯೂರಪ್ಪನವರ ಕೆಂಗಣ್ಣಿಗೆ ಸಿಪಿವೈ ಗುರಿಯಾದ್ರೆ ಸಚಿವ ಸ್ಥಾನ ಕೈ ತಪ್ಪುವುದು ಬಹುತೇಕ ನಿಶ್ಚಿತ. ಮತ್ತೊಂದೆಡೆ ದೆಹಲಿಯ ಹೈಕಮಾಂಡ್ ಸಿಪಿವೈ ಪರ ನಿಲ್ಲಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.