ರಾಮನಗರ : ಚನ್ನಪಟ್ಟಣ ತಾಲೂಕಿನ ಹನುಮಾಪುರದದೊಡ್ಡಿ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶವವನ್ನು ತಾಲೂಕು ಕಚೇರಿ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದ ಕರಿಯಪ್ಪ (60) ಎಂಬುವವರು ಕಳೆದ ರಾತ್ರಿ ಮೃತಪಟ್ಟಿದ್ದರು. ಇವರ ಶವವನ್ನು ಇಲ್ಲಿನ ಸ್ಮಶಾನಕ್ಕೆ ಅಂತ್ಯ ಸಂಸ್ಕಾರಕ್ಕೆ ತಂದಾಗ ಅಡ್ಡಿಪಡಿಸಿದ್ದು, ಹಲವು ವರ್ಷಗಳಿಂದ ಗ್ರಾಮಸ್ಥರು ಸ್ಮಶಾನವಾಗಿ ಉಪಯೋಗಿಸುತ್ತಿದ್ದ ಜಾಗವನ್ನು ಖಾಸಗಿಯವರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆಲ ತಿಂಗಳ ಹಿಂದೆ ಇದೇ ರೀತಿಯ ಸಮಸ್ಯೆ ಉಂಟಾಗಿ ಶವವನ್ನು ನಗರದ ತಾಲೂಕು ಕಚೇರಿಗೆ ತರುವಾಗ ಅಂದಿನ ತಹಸೀಲ್ದಾರ್ ಹಾಗೂ ಪೊಲೀಸರು ಮಾರ್ಗ ಮಧ್ಯೆಯೇ ಶವವನ್ನು ತಡೆದು ಸಮಸ್ಯೆಯನ್ನು ಬಗೆಹರಿಸಿ ಕಳುಹಿಸಿದ್ದರು . ಇದೀಗ ಮತ್ತೆ ಶವಸಂಸ್ಕಾರಕ್ಕೆ ಅಡ್ಡಿ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ತಹಸೀಲ್ದಾರ್ ಸುದರ್ಶನ್ ಶವ ಸಂಸ್ಕಾರಕ್ಕೆ ಗ್ರಾಮದಲ್ಲಿಯೇ ಜಾಗ ಗುರುತಿಸುವುದಾಗಿ ಹೇಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.