ರಾಮನಗರ: ಹಣದಾಸೆಗಾಗಿ ಮೇಕೆ ಮಾರಾಟಗಾರರು ತೂಕ ಹೆಚ್ಚಿಸಲು ಬಲವಂತವಾಗಿ ಮೇಕೆಗೆ ಪೈಪ್ ಮೂಲಕ ನೀರು ಕುಡಿಸಿ ಮೂಕ ಪ್ರಾಣಿಯ ಜೀವಕ್ಕೆ ಕುತ್ತು ತರುವ ಜೊತೆಗೆ ಅಮಾಯಕ ಗ್ರಾಹಕರನ್ನು ವಂಚಿಸುತ್ತಿರುವ ಘಟನೆ ಮಾಗಡಿ ಸಂತೆಯಲ್ಲಿ ನಡೆಯುತ್ತಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆಯುವ ಶುಕ್ರವಾರ ಸಂತೆಯಲ್ಲಿ ಮೇಕೆಗಳಿಗೆ ಬಲವಂತವಾಗಿ ನೀರು ಕುಡಿಸಿ ತೂಕ ಹೆಚ್ಚಿಸಿ ರೈತರಿಗೆ ಮೋಸ ಮಾಡುತ್ತಿರುವ ವಿಚಿತ್ರ ದಂಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಹಣಕ್ಕಾಗಿ ಮಾನವೀಯತೆಯನ್ನೇ ಮರೆತ ವ್ಯಾಪಾರಸ್ಥರು ಮೂಕ ಪ್ರಾಣಿಗಳನ್ನು ಸಾವಿನ ದವಡೆಗೆ ನೂಕುತ್ತಿದ್ದಾರೆ.
ರಾಜ್ಯದಲೇ ಉತ್ತಮ ತಳಿಯ ಕುರಿ ಮೇಕೆಗಳಿಗೆ ಹೆಸರು ಪಡೆದಿರುವ ಮಾಗಡಿ ಕೋಟೆ ಮೈದಾನದಲ್ಲಿ ನಡೆಯುವ ಶುಕ್ರವಾರ ಸಂತೆಯಲ್ಲಿ ವ್ಯಾಪಾರಸ್ಥರ ಕಳ್ಳಾಟ ನಡೆದಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕುರಿ ಮೇಕೆ ಖರೀದಿಸಲು ಬರುವ ಜನರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಮೇಕೆಗಳ ತೂಕ ಹೆಚ್ಚಾಗಲಿ ಎಂದು ಬಲವಂತವಾಗಿ ನೀರುಣಿಸುತ್ತಿರುವ ದಲ್ಲಾಳಿಗಳು ಗ್ರಾಹಕರನ್ನು ವಂಚಿಸುತ್ತಿದ್ದಾರೆ.
ವ್ಯಾಪಾರಸ್ಥರ ಹಣದಾಸೆಗೆ ಮೂಕ ಪ್ರಾಣಿ ಬಲಿ: ಉತ್ತರ ಕರ್ನಾಟಕದ ಭಾಗದಿಂದ ಕುರಿ ಮೇಕೆಗಳನ್ನು ಮಾಗಡಿ ಶುಕ್ರವಾರ ಸಂತೆಗೆ ತರುವ ವ್ಯಾಪಾರಿಗಳು ಸಂತೆ ತಲುಪುವ ಮೊದಲೇ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಸಣ್ಣ ಪಂಪ್ ಬಳಸಿ ಮೇಕೆಗಳ ಬಾಯಿಗೆ ಪೈಪ್ ತುರುಕಿ ಬಲವಂತವಾಗಿ ಹಲವು ಲೀಟರ್ ನೀರು ತುಂಬಿ ಮೇಕೆ ಗಾತ್ರವನ್ನು ಹಿಗ್ಗಿಸಿ ಹಾಗೂ ತೂಕ ಬರುವಂತೆ ಮಾಡಿ ಸಂತೆಗೆ ಬರುವ ಅಮಾಯಕ ಜನರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ.
ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮಾತ್ರ ಮೇಕೆ ಬದುಕುತ್ತದೆ: ಹಣದಾಸೆಗಾಗಿ ಬಲವಂತವಾಗಿ ಮೇಕೆಗೆ ನೀರು ತುಂಬಿಸುವುದರಿಂದ ಅವುಗಳು ಮೂರು ಅಥವಾ ನಾಲ್ಕು ದಿನ ಮಾತ್ರ ಬದುಕುತ್ತವೆ. ಅಷ್ಟರಲ್ಲಿ ಮೇಕೆ ಖರೀದಿಸಿದ ಗ್ರಾಹಕ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಮಾತ್ರವೇ ಮೇಕೆ ಬದುಕುತ್ತದೆ. ಖರೀದಿ ಮಾಡಿದ ಗ್ರಾಹಕ ಯಾಮಾರಿದರೆ ಮೇಕೆ ಮೃತಪಟ್ಟು, ಗ್ರಾಹಕ ಇತ್ತ ಕೊಟ್ಟ ಕಾಸು ಇಲ್ಲದೇ ಅತ್ತ ಖರೀದಿಸಿದ ಮೇಕೆಯೂ ಇಲ್ಲದೇ ಪರಿತಪಿಸುವ ಸ್ಥಿತಿ ನಿರ್ಮಾಣವಾಗುತ್ತದೆ.
ಕೃತ್ಯ ಎಸಗುವವರ ವಿರುದ್ಧ ಕ್ರಮ: ಕೇವಲ ಹಣ ಗಳಿಸುವ ಉದ್ದೇಶದಿಂದ ಮೂಕ ಪ್ರಾಣಿಗಳ ಪ್ರಾಣಕ್ಕೂ ಕುತ್ತು ತರುವ ಜೊತೆಗೆ ಖರೀದಿಸುವ ಅಮಾಯಕ ಗ್ರಾಹಕರಿಗೂ ಅನ್ಯಾಯ ಎಸಗುತ್ತಿರುವ ಖದೀಮರ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಅಮಾನವೀಯ ಕೃತ್ಯ ಎಸಗುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.