ರಾಮನಗರ: ಪ್ರತಿವರ್ಷ ಇಲ್ಲಿ ಆಯೋಜಿಸಲಾಗುವ ಆಹಾರ ಮೇಳ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರ್ಯವೈಶ್ಯ ಜನಾಂಗದ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಏರ್ಪಡಿಸಲಾಗಿದ್ದ ಒಂದು ದಿನದ ರುಚಿ ಸಂತೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರುಚಿ ಸಂತೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳಿದ್ದವು. ಕಣ್ಣು ಹಾಯಿಸಿದ್ದಲ್ಲೆಲ್ಲಾ ಘಮಘಮಿಸುವ ಬಣ್ಣಬಣ್ಣದ ವಿವಿಧ ಭಕ್ಷ್ಯಗಳು ಆಹಾರಪ್ರಿಯರನ್ನು ತನ್ನತ್ತ ಸೆಳೆಯುತ್ತಿದ್ದವು. ತಿಂಡಿಪ್ರಿಯರು ಕೂಡಾ ಮೇಳದಲ್ಲಿ ಮುಗಿಬಿದ್ದು ಖಾದ್ಯಗಳನ್ನು ಸವಿದು ಸಂತಸಪಟ್ಟರು.
ಆರ್ಯವೈಶ್ಯರ ಸಂಸ್ಕೃತಿ, ಆಹಾರ ವಿಶಿಷ್ಟತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶ ಈ ರುಚಿ ಸಂತೆಯದ್ದು. ಇಲ್ಲಿ ಶೆಟ್ಟರ ಮನೆಯ ಸಸ್ಯಹಾರಿ ಆಹಾರ ಪದಾರ್ಥಗಳೂ ಇದ್ದವು. ಬಗೆಬಗೆ ನಿಪ್ಟಟ್ಟು, ಚಕ್ಕುಲಿ, ಕೋಡುಬಳೆ, ಪಡ್ಡು, ಒತ್ತು ಶಾವಿಗೆ, ತಟ್ಟೆ ಇಡ್ಲಿ, ಕೆಂಚ್ ಇಡ್ಲಿ, ವಿವಿಧ ಬಗೆಯ ಹಲ್ವಗಳು, ಬದನೆಕಾಯಿ ಬಜ್ಜಿ, ಬೇಬಿ ಕಾರ್ನ್ ಚಟ್ಪಟ್ ಚಿಲ್ಲಿ, ಬೇಬಿ ಆಲೂ, ಮಸಾಲಾ ಪುರಿ, ಚುರ್‌ಮುರಿ, ನಿಪ್ಪಟ್ಟು ಬರ್ಗರ್, ಕೇಕ್ ಐಸ್‌ಕ್ರೀಂ ಸೇರಿದಂತೆ ಹಲವು ರೀತಿಯ ಸ್ವಾದಿಷ್ಟಕರ ತಿನಿಸುಗಳಿದ್ದವು.
ಇದನ್ನೂ ಓದಿ: 7 ಐಎಎಸ್ ಅಧಿಕಾರಿಗಳ ವರ್ಗಾವಣೆ: ಮಹಾಂತೇಶ್ ಬೀಳಗಿಗೆ ಬೆಸ್ಕಾಂ ಹೊಣೆ
ರುಚಿ ಸಂತೆಗೆ ಆಗಮಿಸಿದ ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ಸ್ಥಳದಲ್ಲಿಯೇ ಆರ್ಯವೈಶ್ಯ ಬಾಣಸಿಗರು ಮಾಡಿಕೊಡುತ್ತಿದ್ದರು. 11ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ವ್ಯವಸ್ಥೆ ಮಾಡಲಾಗಿತ್ತು.