ರಾಮನಗರ: ಮಾಗಡಿ ತಾಲೂಕಿನ ಕುದೂರು ಬಳಿ ಇರುವ ಕಂಚುಗಲ್ ಬಂಡೆಮಠದ ಲಿಂಗಾಯತ ಮಠಾಧೀಶರಾದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಬಸವಲಿಂಗ ಶ್ರೀಗಳಿಗೆ ಮಹಿಳೆಯೊಬ್ಬರ ಮೂಲಕ ಹನಿಟ್ರ್ಯಾಪ್ ಮಾಡಿ, ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಇದರಿಂದ ಒತ್ತಡಕ್ಕೆ ಸಿಲುಕಿದ್ದ ಸ್ವತಃ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಪೊಲೀಸ್ ತನಿಖೆ ವೇಳೆ ಕಂಡುಬಂದಿದೆ.
ಅ. 24ರಂದು ಮಾಗಡಿ ತಾಲೂಕಿನ ಸೋಲೂರು ಬಳಿಯ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿಯವರ ಮೃತದೇಹ ಮಠದ ಕೊಠಡಿಯೊಂದರ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಸ್ವಾಮೀಜಿಯವರು ಬರೆದ ಡೆತ್ನೋಟ್ ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿ ಅನಾಮಧೇಯ ವ್ಯಕ್ತಿ ಬಗ್ಗೆ ಉಲ್ಲೇಖಿಸಿದ್ದು, ಅವರಿಂದ ಮಾನಸಿಕ ಒತ್ತಡ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ಸಿಕ್ಕಿದೆ.
ಅಲ್ಲದೆ, ಬೆಂಗಳೂರು ಮೂಲದ ಮಹಿಳೆಯೋರ್ವರು ಸ್ವಾಮೀಜಿ ಬಳಿ ಆರಂಭದಲ್ಲಿ ತಮ್ಮ ಕಷ್ಟ ಹೇಳಿಕೊಂಡು, ನಂತರ ಸ್ವಾಮೀಜಿ ಜೊತೆ ಸಲುಗೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ನಂತರ ಮಹಿಳೆಯು ಹನಿಟ್ರ್ಯಾಪ್ ಮಾಡಿದ್ದರಿಂದ ಸ್ವಾಮೀಜಿಯವರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳು ಕೇಳಿಬಂದಿದೆ. ಇನ್ನೊಂದೆಡೆ ಆತ್ಮಹತ್ಯೆ ಹಿಂದೆ ಮಠದ ಆಸ್ತಿ ವಿವಾದವೂ ಕಾರಣವಾಗಿದೆ ಎಂಬೆಲ್ಲ ಮಾತುಗಳೂ ಕೇಳಿಬಂದಿವೆ. ಈ ನಡುವೆ, ಸ್ವಾಮೀಜಿಯವರದ್ದು ಎನ್ನಲಾದ ಡೆತ್ನೋಟ್ ಹಾಗೂ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಎಸ್ಪಿ ಹೇಳುವುದೇನು?: ಪ್ರಕರಣದ ಬಗ್ಗೆ ಮಾತನಾಡಿರುವ ರಾಮನಗರ ಎಸ್ಪಿ ಸಂತೋಷ್ ಬಾಬು, ಸ್ವಾಮೀಜಿಯವರು ಡೆತ್ನೋಟ್ನಲ್ಲಿ ಕೆಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಅವರ ಸಾವಿನ ಹಿಂದೆ ಡೆತ್ನೋಟ್ನಲ್ಲಿರುವ ವ್ಯಕ್ತಿಗಳ ಪಾತ್ರವೇನೂ ಇಲ್ಲ. ಮತ್ತೊಬ್ಬ ಅನಾಮಧೇಯ ವ್ಯಕ್ತಿಯ ಬಗ್ಗೆ ಅವರು ಉಲ್ಲೇಖಿಸಿ, ಅವನಾಡಿರುವ ಮಾತುಗಳಿಂದ ಬೇಜಾರಾಗಿದೆ ಅಂತ ಬರೆದಿದ್ದಾರೆ. ಸದ್ಯ ಈ ಬಗ್ಗೆ ತನಿಖೆಯು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಎಫ್ಐಆರ್ನಲ್ಲಿಲ್ಲ ಆರೋಪಿ ಹೆಸರು: ಶ್ರೀಗಳ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಗಡಿ ತಾಲೂಕಿನ ಕುದೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ, ಎಫ್ಐಆರ್ನಲ್ಲಿ ಯಾವೊಬ್ಬ ಆರೋಪಿಯ ಹೆಸರು ಸಹ ದಾಖಲಾಗಿಲ್ಲ. ಇದು ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ.
ಒಟ್ಟಾರೆ, ಸ್ವಾಮೀಜಿಯವರು ನಿಜವಾಗಿಯೂ ಹನಿಟ್ರ್ಯಾಪ್ಗೆ ಒಳಗಾಗಿದ್ದರಾ? ಹಾಗೂ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.
ಇದನ್ನೂ ಓದಿ: ಮರ್ಯಾದೆಗೆ ಅಂಜಿ ಸ್ವಾಮೀಜಿ ಆತ್ಮಹತ್ಯೆ?.. ಡೆತ್ನೋಟ್ನಲ್ಲಿರುವುದು ಏನು?