ಬೆಂಗಳೂರು: ಕಳೆದ 115 ದಿನಗಳಿಂದ ಕಗ್ಗಂಟಾಗಿದ್ದ ಬಿಡದಿಯ ಟೊಯೋಟ ಕಿರ್ಲೋಸ್ಕರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಕೊನೆಗೂ ಸಫಲರಾಗಿದ್ದಾರೆ.
ಇಂದು ಟೊಯೋಟ ಕಿರ್ಲೋಸ್ಕರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸುದೀಪ್ ದಾಲ್ವೆ, ಉಪಾಧ್ಯಕ್ಷ ಶಂಕರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಮಾಗಡಿ ಶಾಸಕ ಮಂಜುನಾಥ ಜತೆ ಮಹತ್ವದ ಮಾತುಕತೆ ನಡೆಸಿದ ಡಿಸಿಎಂ, ಈ ತಿಂಗಳ 5ನೇ ತಾರೀಖಿನೊಳಗೆ ಎಲ್ಲ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಹಾಗೂ ಇಂತಹ ಸಮಸ್ಯೆಗಳು ಭವಿಷ್ಯದಲ್ಲಿ ಮರುಕಳಿಸಬಾರದು ಎಂದು ಆಡಳಿತ ಮಂಡಳಿ ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಬಿಕ್ಕಟ್ಟು ಸಂಪೂರ್ಣವಾಗಿ ಸುಖಾಂತ್ಯವಾಗಿದೆ. 2,800 ಕಾರ್ಮಿಕರು ಇದೀಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇನ್ನೂ ಈ ತಿಂಗಳ 5ನೇ ದಿನಾಂಕದವರೆಗೂ ಸಮಯ ಇದೆ. ಅಷ್ಟರೊಳಗೆ ಉಳಿದ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 2,800 ಕಾರ್ಮಿಕರು ಈಗಾಗಲೇ ಆಡಳಿತ ಮಂಡಳಿಗೆ ಮುಚ್ಚಳಿಕೆ ಬರೆದುಕೊಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದರಲ್ಲಿ 1,000 ಕಾರ್ಮಿಕರಿಗೆ ಯೂನಿಯನ್ ಕಡೆಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈ ಆಧಾರದ ಮೇಲೆಯೇ ಇವರೆಲ್ಲರೂ ಈಗ ಕೆಲಸಕ್ಕೆ ಬರುತ್ತಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.