ರಾಮನಗರ : ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನಪಟ್ಟಣದ ಲಂಬಾಣಿ ತಾಂಡಾ ಬಳಿ ನಡೆದಿದೆ. ಇನೋವಾ ಹಾಗೂ ಆಲ್ಟೊ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನೋವಾ ಕಾರು ಚಾಲಕನ ಅತಿವೇಗದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಹೇಳಲಾಗಿದೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ. ಮೃತರ ಹೆಸರು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆರೆಯಲ್ಲಿ ಮುಳುಗಿ ಮೂವರು ಸಾವು : ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಾಗಡಿಯ ಮುತ್ತಸಾಗರ ಗ್ರಾಮದಲ್ಲಿ ನಡೆದಿದೆ. ಮುತ್ತಸಾಗರ ಕೆರೆಯಲ್ಲಿ ಕುರಿ ತೊಳೆಯಲು ಹೋಗಿದ್ದ ಗೊಲ್ಲರಹಟ್ಟಿ ಗ್ರಾಮದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ನಾಗರಾಜು(30), ಜ್ಯೋತಿ(35), ಲಕ್ಷ್ಮೀ(22) ಎಂದು ಗುರುತಿಸಲಾಗಿದೆ. ಇಬ್ಬರ ಮೃತದೇಹವನ್ನು ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದಿದ್ದು, ಮತ್ತೊಂದು ಶವದ ಪತ್ತೆ ಕಾರ್ಯ ಮುಂದುವರೆದಿದೆ. ಕುದೂರು ಪೊಲೀಸ್ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರದಲ್ಲಿ ಎತ್ತುಗಳು ನೀರಿನಲ್ಲಿ ಮುಳುಗಿ ಸಾವು: ಕೆರೆಯಲ್ಲಿ ಮೈ ತೊಳೆಯಲೆಂದು ಕರೆದೊಯ್ದಿದ್ದ ಎತ್ತುಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಾರುವನಹಳ್ಳಿಯಲ್ಲಿ ನಡೆದಿದೆ. ರೈತ ಹನುಮಂತಪ್ಪ ಚಿಲಕನಹಟ್ಟಿ ಗ್ರಾಮದ ಬಳಿಯಿರುವ ಮಾರ್ಗದಯ್ಯನ ಕೆರೆಯಲ್ಲಿ ಎತ್ತುಗಳ ಮೈ ತೊಳೆಯಲು ಕರೆದುಕೊಂಡು ಹೋದಾಗ ಘಟನೆ ನಡೆದಿದೆ.
ಟೈರ್ ಬಂಡಿ ಕಟ್ಟಿಕೊಂಡು ಎರಡು ಎತ್ತುಗಳನ್ನು ಮೈ ತೊಳೆಯುವುದಕ್ಕೆಂದು ರೈತ ಹನುಮಂತಪ್ಪ ಕೆರೆಗೆ ಬಂದಿದ್ದರು. ಈ ವೇಳೆ ಎತ್ತುಗಳು ಇದ್ದಕ್ಕಿದ್ದಂತೆ ಗುಂಡಿಗೆ ಬಿದ್ದಿವೆ. ಬಂಡಿಗೆ ಎತ್ತುಗಳನ್ನು ಕಟ್ಟಿದ್ದರಿಂದ ಈಜಲು ಸಾಧ್ಯವಾಗದೇ ಎತ್ತುಗಳು ಮುಳುಗಿ ಸಾವನ್ನಪ್ಪಿವೆ. ಜೊತೆಗೆ ರೈತ ಹನುಮಂತಪ್ಪ ನೀರಿನಲ್ಲಿ ಮುಳುಗಿ ಅಸ್ವಸ್ಥನಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಚಿಕ್ಕಮಗಳೂರು: ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ, ಗಂಡ ಹೆಂಡತಿ ಸ್ಥಳದಲ್ಲೇ ಸಾವು.. ಮಕ್ಕಳಿಬ್ಬರ ಸ್ಥಿತಿ ಗಂಭೀರ