ರಾಮನಗರ: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು, ಮಣ್ಣಿನ ದೀಪಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತದೆ. ಮನಸಿನ ಕತ್ತಲೆಯನ್ನು ಕಳೆದು ಅರಿವಿನ ಬೆಳಕನ್ನು ಹೊತ್ತಿಸುವ ವಿಶೇಷ ಹಬ್ಬ ದೀಪಾವಳಿಯ ಸಮಯದಲ್ಲಿ ಪ್ರತಿಯೊಂದು ಮನೆಗಳಲ್ಲಿ ಬೆಳಕು ಚೆಲ್ಲುವ ಸಾಂಪ್ರದಾಯಿಕ ಹಣತೆಗಳನ್ನು ತಯಾರಿಸುವ ಕೆಲಸವನ್ನು ಇಲ್ಲೊಬ್ಬರು ತಲತಲಾಂತರದಿಂದ ಮಾಡಿಕೊಂಡು ಬರುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದೇ ಹಲವು ಬಗೆಯ ವಿಶೇಷ ಮಣ್ಣಿನ ದೀಪಗಳು ಇಲ್ಲಿ ತಯಾರಾಗುತ್ತವೆ.
ದೀಪಾವಳಿ ಹಬ್ಬ ಬಂದ್ರೆ ಸಾಕು, ರಾಮನಗರದ ಜಾನಪದ ಲೋಕದಲ್ಲಿ ಅನುಸೂಯಮ್ಮ ತಯಾರಿಸುವ ಮಣ್ಣಿನ ದೀಪಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತೆ. ಇವರು ತಯಾರಿಸುವ ಮಣ್ಣಿನ ದೀಪಗಳ ವೈಶಿಷ್ಟ್ಯ ಗುಣವೇ ಹಾಗಿದೆ. ಬಗೆಬಗೆಯ ಮಣ್ಣಿನ ಹಣತೆಗಳನ್ನು ಸುಲಲಿತವಾಗಿ ಇವರು ತಯಾರು ಮಾಡುತ್ತಾರೆ. ಪೂರ್ವಿಕರ ಕಲೆಯು ಬಳುವಳಿಯಾಗಿ ಬಂದ ಈ ಕುಂಬಾರಿ ಕಲೆಯನ್ನು ಇವರು 42 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿ ಬಂದಾಗ ಇಲ್ಲಿನ ನೈಸರ್ಗಿಕ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ ಬರುತ್ತೆ. ರಾಜ್ಯದ ವಿವಿಧೆಡೆಯಿಂದ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರು ಅನುಸೂಯಮ್ಮ ತಯಾರು ಮಾಡುವ ಹಣತೆಗಳನ್ನು ಕೊಳ್ಳುತ್ತಾರೆ. ಇದಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರ ಮನೆಯಲ್ಲಿ ಇಂದಿಗೂ ಇವರ ಹಣತೆಗಳು ಉರಿಯುತ್ತಿವೆ ಎಂದ್ರೆ ಅತಿಶಯೋಕ್ತಿಯಲ್ಲ.
ಮ್ಯಾಜಿಕ್ ದೀಪ, ಅಂಬಾರಿ ದೀಪ, ನವಿಲು ದೀಪ, ಗಣೇಶ ದೀಪ, ಆನೆ ದೀಪ, ನವ ದೀಪ, ಮಡಿಲು ದೀಪ, ಲಕ್ಷ್ಮಿ ದೀಪ, ಹೀಗೆ ಹಲವಾರು ಬಗೆ ಬಗೆಯ ಹಣತೆಗಳು ಇಲ್ಲಿ ಮಾರಾಟವಾಗುತ್ತಿದೆ.
ಆದ್ರೆ ಇತ್ತೀಚಿನ ಜಾಗತಿಕರಣಕ್ಕೆ ಸಿಲುಕಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪಿಂಗಾಣಿ, ಸ್ಟೀಲ್, ಮೇಣದಬತ್ತಿ ಮತ್ತಿತರ ಹಣತೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಮಣ್ಣಿನ ಸಾಂಪ್ರದಾಯಿಕ ಹಣತೆಗಳಿಗೆ ಬೇಡಿಕೆ ಕಡಿಮೆ ಆಗಿದೆ. ಇತ್ತೀಚಿನ ಕೊರೊನಾ ಬಂದಾಗಿನಿಂದ ಹಣತೆಯನ್ನು ಕೇಳುವವರೇ ಇಲ್ಲದಾಗಿದೆ. ಈ ನಡುವೆ ಅನುಸೂಯಮ್ಮ ತಯಾರು ಮಾಡುವ ವಿವಿಧ ಮಣ್ಣಿನ ದೀಪಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ.
ದೇಸಿ ವಸ್ತುಗಳಿಗೆ ಪ್ರೋತ್ಸಾಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಪ್ರಧಾನಿ ಮಾತಿಗೆ ಗೌರವ ಕೊಟ್ಟು ನಮ್ಮ ಮಣ್ಣಿನಿಂದ ತಯಾರು ಮಾಡಿದ ದೇಸಿ ಹಣತೆಗಳನ್ನು ಖರೀದಿಸಿ ಈ ಬಾರಿ ಪ್ರತಿ ಮನೆಯಲ್ಲೂ ದೀಪಾವಳಿ ಹಬ್ಬವನ್ನು ಆಚರಿಸೋಣ. ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಇದನ್ನೂ ಓದಿ: ಹಣತೆ ತಯಾರಿಕೆಯಲ್ಲಿ ತೊಡಗಿದ ಶ್ರೀ ಮಾಧವ ಗೋಶಾಲೆ.. ಪರಿಸರ ರಕ್ಷಣೆ ಜತೆಗೆ ಮಹಿಳೆಯರಿಗೆ ಉದ್ಯೋಗ