ರಾಮನಗರ: ಕೊರೊನಾ ಎಫೆಕ್ಟ್ನಿಂದಾಗಿ ದೇಶವೆ ಲಾಕ್ಡೌನ್ ಆಗಿದೆ. ಇತ್ತ ದಿನಗೂಲಿ ನೌಕರರ ಕುಟುಂಬ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಗರ ಜಿಲ್ಲೆಯಾದ್ಯಂತ ಇಂತಹ ಪರಿಸ್ಥಿತಿ ತಲೆದೋರಿದ್ದು, ಚನ್ನಪಟ್ಟಣ ನಗರದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಳ್ಳಾರಿ ಮೂಲದ ಕಾರ್ಮಿಕರು ವಲಸೆ ಬಂದು ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆ ತಮ್ಮ ಊರಿಗೂ ಹೋಗದೆ, ಇತ್ತ ಕೆಲಸವೂ ಸಿಗದೆ ತಮ್ಮ ಜೋಪಡಿಗಳಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಲಿ ಇಲ್ಲದ ಕಾರಣ ಒಂದೊತ್ತಿನ ಊಟಕ್ಕೂ ಅವರು ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇಂದು ಚನ್ನಪಟ್ಟಣ ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕಷ್ಟ ಅವಲೋಕಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ಮೂಲದವರು ತಮ್ಮನ್ನು ಊರಿಗೆ ಕಳುಹಿಸಿ ಕೊಡಿ ಎಂದು ನಗರಸಭೆ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ನಗರಸಭೆ ಆಯುಕ್ತರು, ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸಹಾಯ ಮಾಡುವ ಭರವಸೆ ನೀಡಿದರು.