ರಾಮನಗರ: ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭಕ್ಕೆ ಮತ್ತೊಮ್ಮ ಬೃಹತ್ ವೇದಿಕೆ ಸಜ್ಜಾಗಿದೆ. ಮೊದಲ ಪಾದಯಾತ್ರೆ ಯಶಸ್ಸು ನಂತರ ಎರಡನೇ ಪಾದಯಾತ್ರೆ ಯಶಸ್ವಿಗೊಳಿಸಲು ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿದೆ. ಮೊದಲ ಹಂತದ ಪಾದಯಾತ್ರೆ ಸಕ್ಸಸ್ ಹಿನ್ನೆಲೆಯಲ್ಲಿ ಎರಡನೇ ಹಂತದ ಪಾದಯಾತ್ರೆಯನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ತಯಾರಿ ನಡೆಸಲಾಗಿದೆ.
ನಾಳೆ ರಾಮನಗರದಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಒಟ್ಟು ಐದು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲ ಕಾಂಗ್ರೆಸ್ ಶಾಸಕರು ಸಕ್ರಿಯವಾಗಿ ಭಾಗಿಯಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಲಿದ್ದು, ಐದು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯ ಮೊದಲ ದಿನ ಅವರು ಭಾಗವಹಿಸುವ ಸಾಧ್ಯತೆ ಇದೆ.
ಎರಡನೇ ದಿನದ ಪಾದಯಾತ್ರೆಯು ನಗರದ ಕನಕಪುರ ವೃತ್ತದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ರಾಜ್ಯದ ವಿವಿದೆಡೆಯಿಂದ ೧೦ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಮಂಡ್ಯ, ತುಮಕೂರು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆಯಿಂದ ಸಾವಿರಾರು ಕಾರ್ಯಕರ್ತರು ಆಗಮಿಸಲಿದ್ದು ಈಗಾಗಲೇ ವೇದಿಕೆ ಕೂಡ ಸಿದ್ಧತೆ ಕಾರ್ಯ ಸಂಪೂರ್ಣ ಮುಗಿದಿದೆ.
ಪಾದಯಾತ್ರೆ ಬರುವ ಅಂದಾಜು 30 ಸಾವಿರಕ್ಕೂ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆ ಸಮಯಕ್ಕೆ ಪಾದಯಾತ್ರೆ ಪ್ರಾರಂಭ ಆಗಲಿದ್ದು, ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೇರಿ ಹಲವರು ಭಾಗಿಯಾಗಲಿದ್ದು, ಮೊದಲಿಗೆ ಚಾಮುಂಡೇಶ್ವರಿ ದೇವಸ್ಥಾನ, ದರ್ಗಾ, ಚರ್ಚ್ ಗೆ ಭೇಟಿ ನೀಡಿ ಚಾಲನೆ ಕೊಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ : ನಾಳೆಯಿಂದ ನಡೆಯಲಿರುವ ಮೇಕೆದಾಟು 2.0 ಪಾದಯಾತ್ರೆ ನಡೆಯುವ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ನೀರಿಗಾಗಿ ನಡೆಯುತ್ತಿರುವ ಹೋರಾಟ. ನಮ್ಮ ನೀರು, ನಮ್ಮ ಹಕ್ಕು ನೀರಿಗಾಗಿ ನಮ್ಮ ನಡಿಗೆ. ಕಾಂಗ್ರೆಸ್ನ ಎಲ್ಲ ಹಿರಿಯ ನಾಯಕರು ಭಾಗಿಯಾಗುತ್ತಾರೆ. ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದರು.
ಇದನ್ನೂ ಓದಿ: ಪಕ್ಷಾತೀತ ಹೋರಾಟದ ಮುಂದಾಳತ್ವ ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ: ಡಿಕೆಶಿ