ರಾಮನಗರ: ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಕಟುವಾಗಿ ಟೀಕಿಸಿದ್ದಾರೆ.
ಜಿಲ್ಲೆಯ ಬಿಡದಿಯಲ್ಲಿ ಟೊಯೋಟ ಕಿರ್ಲೋಸ್ಕರ್ ಕಂಪನಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಮಾದರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಕಳೆದ 73 ವರ್ಷಗಳಲ್ಲಿ ಆಗದ ಕೆಲಸವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಇದನ್ನು ಸಹಿಸಲಾಗದೆ ಕೆಲವರು ಅಪಪ್ರಚಾರ ನಡೆಸುತ್ತ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ ಎಂದರು.
ಇದನ್ನೂ ಓದಿ: ರೈತರ ಪರವಾಗಿ ಕೆಲಸ ಮಾಡುವುದಕ್ಕೆ ನಾನು ಸಿದ್ಧ : ಸಚಿವ ಆರ್. ಶಂಕರ್
ರೈತ ವಿರೋಧಿ ಕೆಲಸಗಳಲ್ಲಿ ತೊಡಗಿರುವ ಕೆಲವರು ಈ ಎಲ್ಲ ಷಡ್ಯಂತ್ರಗಳ ಹಿಂದೆ ಇದ್ದಾರೆ. ದೇಶ ಮುನ್ನಡೆಯುವುದನ್ನು ವ್ಯವಸ್ಥಿತವಾಗಿ ತಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆರ್ಥಿಕವಾಗಿ ಪ್ರಬಲರಾಗುವುದು ಅವರಿಗೆ ಇಷ್ಟವಿಲ್ಲ. ಯಾವತ್ತಿಗೂ ಅವರು ಮತಬ್ಯಾಂಕ್‌ನ ಬಲಿಪಶುಗಳಾಗಿಯೇ ಇರಬೇಕು ಎಂಬುದು ಅವರ ದುರುದ್ದೇಶವಾಗಿದೆ. ದಲ್ಲಾಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.