ರಾಮನಗರ: ಬಿಜೆಪಿ ಸರ್ಕಾರದ ಆಯಸ್ಸು 3-4 ತಿಂಗಳು ಎಂದು ಕೋಡಿಮಠ ಸ್ವಾಮೀಜಿ ಹೇಳಿಕೆ ನೀಡಿರುವ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾನೇನು ಜ್ಯೋತಿಷಿ ಅಲ್ಲ. ಆದರೆ ಇತ್ತೀಚಿನ ಕೆಲ ನಡವಳಿಕೆಗಳನ್ನ ನೋಡಿದ್ರೆ ಸರ್ಕಾರ ಯಾವ ಸಮಯದಲ್ಲಿ ಬೇಕಾದ್ರು ಬೀಳುವಂತಿದೆ. ಅದಕ್ಕೆ ಸಮಯ ಬರುತ್ತೆ ಕಾದುನೋಡಿ ಎಂದು ಸರ್ಕಾರದ ಅಳಿವಿನ ಬಗ್ಗೆ ಮುನ್ಸೂಚನೆ ನೀಡಿದ್ರು.
ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದ 14 ತಿಂಗಳಲ್ಲಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದೆ. 1200 ಕೋಟಿ ಹಣವನ್ನ ಶಾಲಾ ಕಾಲೇಜುಗಳ ಅಭಿವೃದ್ಧಿಗಾಗಿಯೇ ಬಿಡುಗಡೆ ಮಾಡಿದ್ದೆ. ಇವತ್ತು ಅಧಿಕಾರದಲ್ಲಿ ಇರುವವರು ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹಾಗೂ ಕೆಲಸ ಎರಡನ್ನೂ ಮಾಡದೆ ಬಿಟ್ಟಿ ಪ್ರಚಾರ ಪಡೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿಎಂ ಸ್ಥಾನ ಮುಳ್ಳಿನ ಹಾಸಿಗೆಯಂತಿತ್ತು:
ನಾನು ಯಾರನ್ನೂ ಟೀಕಿಸುವುದಿಲ್ಲ. ನಾನು ಸಿಎಂ ಆಗಿದ್ದ ವೇಳೆ ಸಾಕಷ್ಟು ನೋವು ಅನುಭವಿಸಿದ್ದೇನೆ. ಹಲವರು ನನಗೆ ತೊಂದರೆ ಕೊಟ್ಟಿದ್ದಾರೆ. ನನಗೆ ಸಿಎಂ ಅವಧಿ ಮುಳ್ಳಿನ ಹಾಸಿಗೆಯಂತಿತ್ತು ಎಂದು ಅವರು, ನನ್ನ ಯೋಜನೆಗಳು ಎಲ್ಲ ಬಡವರ ಬಾಳಿಗೆ ಸಹಾಯವಾಗಿವೆ. ಪ್ರತಿ ತಾಲೂಕಿನ ರೈತರ ಸಾಲಮನ್ನಾ ವಿವರದ ಬುಕ್ ಮಾಡುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಆ ಪುಸ್ತಕವನ್ನ ಬಿಡುಗಡೆ ಮಾಡುತ್ತೇನೆ ಎಂದರು.
ಬಿಜೆಪಿಯವರು ನಮ್ಮ ಸರ್ಕಾರವನ್ನ ಬೀಳಿಸಲು ಶಾಸಕರ ಖರೀದಿಗೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಈ ಹಣ ಎಲ್ಲಿಂದ ಬಂತು? ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿದ್ಯುತ್ ಶಕ್ತಿ ಹಗರಣ ನಡೆದಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಇಂಧನ ಸಚಿವರಾಗಿದ್ದರು. ನಾನು ಡಿಕೆಶಿಗೆ ಹೇಳಿದ್ದೆ, ಕಳೆದ ಸರ್ಕಾರದ ವಿದ್ಯುತ್ ಹಗರಣವನ್ನ ತನಿಖೆ ಮಾಡಿ ಅಂತಾ ತಿಳಿಸಿದ್ದೆ. ಅವತ್ತು ಡಿಕೆಶಿ ತನಿಖೆ ಮಾಡಿಸಿದ್ರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಯಡಿಯೂರಪ್ಪ ಅವರೇ ಐಟಿಗೆ ದೂರು ನೀಡಿ, ಡಿಕೆಶಿ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಪತ್ರ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ರು.