ರಾಮನಗರ: ಚಿಕ್ಕ ವಯಸ್ಸಿನಿಂದಲೂ ಪರಿಸರ ಕಾಳಜಿ ಹೊಂದಿದ್ದ ಶಿಕ್ಷಕರೊಬ್ಬರು ನಿವೃತ್ತಿಯ ಬಳಿಕವೂ ಬರಡು ಭೂಮಿಯಲ್ಲಿ ಹಸಿರು ಹೊದಿಸಿ ಪರಿಸರ ಪ್ರೇಮ ಮೆರೆದಿದ್ದಾರೆ. ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಪುಟ್ಟಸ್ವಾಮಿ ಸತತ 32 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಇದೀಗ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದ್ದಾರೆ.
ಇವರ ಪರಿಸರ ಪ್ರೇಮಕ್ಕೆ ಒಂದು ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಉದ್ಯಾನವನಗಳು ಹಸಿರಾಗಿ ನಿಂತಿವೆ. ಈ ಉದ್ಯಾನದಲ್ಲಿ ವಿವಿಧ ಜಾತಿಯ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದಾರೆ.
ಭೂಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ 3 ಎಕರೆ ಪ್ರದೇಶದಲ್ಲಿ ಇವರು ಕವಿವನ ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡಮರಗಳು ಈಗ ಬೆಳೆದು ಬರಡಾಗಿದ್ದ ಪ್ರದೇಶ ಅರಣ್ಯವಾಗಿದೆ. ಕವಿವನವು ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿದೆ. ಪಕ್ಷಿಗಳಿಗೆ ಆಹಾರ ಒದಗಿಸುವ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ ಸಹಿತ ಹತ್ತಾರು ಹಣ್ಣಿನ ಗಿಡಗಳನ್ನು ನೆಟ್ಟು ಪಕ್ಷಿ ಸಂಕುಲದ ಉಳಿವಿಗೂ ಪಣ ತೊಟ್ಟಿದ್ದಾರೆ.
ಪರಿಸರ ಜಾಗೃತಿ ಮೂಡಿಸುತ್ತಿರುವ ಪುಟ್ಟಸ್ವಾಮಿ
ಚನ್ನಪಟ್ಟಣ ನಗರದ ಸಾರ್ವಜನಿಕ ಉದ್ಯಾನಗಳನ್ನು ಹಸಿರುಮಯವಾಗಿಸಲು ಅವಿರತವಾಗಿ ದುಡಿಯುತ್ತಿದ್ದಾರೆ. ಖಾಲಿ ಜಾಗ ಇರುವ ಕಡೆಯಲ್ಲೆಲ್ಲ ಸಸಿಗಳನ್ನು ನೆಟ್ಟು, ಪೋಷಿಸುತ್ತ ಬಂದಿದ್ದಾರೆ. ರಸ್ತೆ ಬದಿಗಳಲ್ಲಿಯೂ ಗಿಡ-ಮರಗಳನ್ನು ಬೆಳೆಸುತ್ತಾ ಬಂದಿದ್ದಾರೆ. ಚನ್ನಪಟ್ಟಣ- ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಆವರಣದಲ್ಲಿ ಪಾಳು ಬಿದ್ದಿದ್ದ 3 ಎಕರೆ ಸರ್ಕಾರಿ ಜಾಗದಲ್ಲಿ ಜೀವೇಶ್ವರ ವನವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಜನತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇದುವರೆಗೂ ಪರಸರ ಸಂರಕ್ಷಣೆಗಾಗಿ 30 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಗಿಡಗಳನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದನ್ನೂ ಓದಿ: ಅಲೆಮಾರಿಗಳಿಗೆ ಸೂರು: ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸುವಂತೆ ಡಿಸಿ ಸೂಚನೆ