ರಾಮನಗರ: ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಹಾಸ್ಟೆಲ್ನಲ್ಲಿ 50ಕ್ಕೂ ಹೆಚ್ಚು ಮಕ್ಕಳು ಕಜ್ಜಿ, ತುರಿಕೆ ಮೊದಲಾದ ಚರ್ಮರೋಗಗಳಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ಸಮಗ್ರ ಸುದ್ದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಲೂಕಿನ ಕೈಲಾಂಚ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿಆರ್ ಅಂಬೇಡ್ಕರ್ ಹಾಸ್ಟೆಲ್ನಲ್ಲಿನ ಮಕ್ಕಳು ಚರ್ಮ ತುರಿಕೆ,ಕಜ್ಜಿ ಸಮಸ್ಯೆಯಿಂದ ಹೈರಾಣಾಗಿದ್ದರು. ಇದಕ್ಕೆ ಹಾಸ್ಟೆಲ್ ಅವ್ಯವಸ್ಥೆಯೇ ಕಾರಣವಾಗಿತ್ತು. ಸ್ನಾನ ಹಾಗೂ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿತ್ತು. ಅದರಲ್ಲೂ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದ್ದರ ಬಗ್ಗೆ ಈಟಿವಿ ಭಾರತ್ ಸುದ್ದಿ ಪ್ರಕಟಿಸಿತ್ತು. ಇದೀಗ ಸ್ಥಳಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎನ್ನುವ ಮೂಲಕ ವಾರ್ಡನ್ಗೆ ತಲೆದಂಡದ ಮುನ್ಸೂಚನೆ ನೀಡಿದ್ದಾರೆ.
ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಸೇರಿ 138 ಮಕ್ಕಳಿದ್ದಾರೆ. ಸ್ವಚ್ಛತೆ ಕೊರತೆಯಿಂದ ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಚರ್ಮ ರೋಗ ಉಲ್ಬಣಿಸಿದೆ. ಸರ್ಕಾರಿ ಹಾಸ್ಟೆಲ್ನಲ್ಲಿ ಇಂತಹ ದುರ್ಘಟನೆ ನಡೆದಿರುವುದಕ್ಕೆ ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ.
ಸರ್ಕಾರ ವಸತಿ ಶಾಲೆಗಳಿಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತದೆ. ಅಲ್ಲದೆ ಪೋಷಕರು ಸರ್ಕಾರದ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನ ವಸತಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೂ ಇಂತಹ ಘಟನೆಗಳಿಂದ ಸಮಸ್ಯೆ ಎದುರಾಗಿದೆ, ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುವುದು ನಂತರ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತವೆಂದು ಸಚಿವ ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.