ರಾಮನಗರ: ಸಾಧಿಸುವ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೃಷಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ರಾಮನಗರದ ನಾರಿ.. ಕೃಷಿ ಕಾರ್ಯಕ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ಗಟ್ಟಿಗಿತ್ತಿ ಮಹಿಳೆಯರಿಗೆ ಮಾದರಿ ಆಗಿದ್ದಾರೆ. ತಮ್ಮ ಆರು ಎಕರೆ ಜಮೀನಿನಲ್ಲಿ ತಾವೇ ಟ್ರ್ಯಾಕ್ಟರ್ ಓಡಿಸಿ ಕೃಷಿ ಮಾಡುತ್ತಿದ್ದಾರೆ ರಾಮನಗರ ಜಿಲ್ಲೆಯ ಶಾಂತಮ್ಮ.
ಗಂಡ ಹಾಸಿಗೆ ಹಿಡಿದಾಗ ಕೃಷಿ ಜತೆ ಸಂಸಾರದ ಹೊಣೆ.. ದುಡಿದು ಕುಟುಂಬ ಸಾಗಿಸುತ್ತ ಮನೆಗೆ ಆಧಾರಸ್ತಂಭವಾಗಿದ್ದ ಪತಿ ಹಾಸಿಗೆ ಹಿಡಿದಾಗ ಇಬ್ಬರು ಮಕ್ಕಳ ಜೊತೆಗೆ ಇಡೀ ಸಂಸಾರದ ನೊಗ ಹೆಗಲ ಮೇಲೆ ಬಿದ್ದಾಗ ಅಂಜದೆ ಅನಿವಾರ್ಯವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರು ಶಾಂತಮ್ಮ.
ಹೌದು, ಇದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಕಗ್ಗಲಹಳ್ಳಿ ಗ್ರಾಮದ ಶಾಂತಮ್ಮನ ಸಾಧನೆಯ ಹಾದಿ. ಪತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅನಿವಾರ್ಯವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಇರುವ ಆರು ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಮಾಡಲು ನಿರ್ಧಾರ ಮಾಡಿದರು. ಅಡುಗೆ ಮನೆಯಲ್ಲಿ ಸೌಟು ಹಿಡಿಯೋ ಕೈಯಲ್ಲಿ ಟ್ರ್ಯಾಕ್ಟರ್ ಸ್ಟೇರಿಂಗ್ ಹಿಡಿದು ತಾವೇ ಸ್ವತಃ ಉಳುಮೆ ಆರಂಭಿಸಿದರು.
ಕೃಷಿಯಲ್ಲಿ ಮಿಶ್ರ ಬೇಸಾಯ ಪದ್ಧತಿ.. ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿರುವ ಶಾಂತಮ್ಮ, ತಂದೆ ಹಾಗು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದರು. ಜಮೀನಿನಲ್ಲಿ ಲಾಭ ಬರಬೇಕಾದರೆ ಏಕ ಬೆಳೆಗೆ ಅವಲಂಬಿತವಾಗದೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಬೇಕು. ಇದೇ ಇವರ ಯಶಸ್ಸಿನ ಗುಟ್ಟಾಯಿತು. ಪ್ರಸ್ತುತ ದಿನಗಳಲ್ಲಿ ಕೂಲಿ ಕಾರ್ಮಿಕರು ಸಿಗದ ಪರಿಸ್ಥಿತಿ ಇರುವಾಗ, ಕೂಲಿ ಕಾರ್ಮಿಕರ ಕೊರತೆ ಎದುರಾದಾಗ ಕುಗ್ಗದೆ ಜಮೀನಿನ ಎಂತಹ ಕಠಿಣ ಕೆಲಸವನ್ನಾದರೂ ಪುರುಷರಿಗಿಂತ ತಾನೇನು ಕಡಿಮೆ ಇಲ್ಲ ಎಂಬಂತೆ ಕೆಲಸ ಮಾಡುತ್ತಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಧೀರ ಸಾಕಷ್ಟು ನಾರಿಯರಿಗೆ ಸ್ಫೂರ್ತಿ ಆಗುವಂತಿದ್ದಾರೆ.
ತಮ್ಮ ಜಮೀನಿನಲ್ಲಿ ಬಾಳೆ, ಮಾವು, ತೆಂಗು, ರೇಷ್ಮೆ, ಪರಂಗಿ ಜೊತೆಗೆ ಇತರೆ ತರಕಾರಿ ಬೆಳೆ ಬೆಳೆಯಲು ಆರಂಭಿಸಿದ್ದರು. ಜೊತೆಗೆ ಹೈನುಗಾರಿಕೆ, ಮೇಕೆ ಸಾಕಾಣಿಕೆಯನ್ನೂ ಮಾಡಿದ್ದಾರೆ. ಇದರ ಜೊತೆಗೆ ಕೃಷಿ ಹಾಗು ತೋಟಗಾರಿಕೆ ಇಲಾಖೆ ಸವಲತ್ತುಗಳ ಸಮರ್ಪಕ ಬಳಕೆ ಮಾಡಿಕೊಂಡ ಶಾಂತಮ್ಮ, ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ದಳ್ಳಾಳಿಗಳ ಕಾಟ ಅರಿತ ಇವರು ಮಿಶ್ರ ಬೇಸಾಯದ ಜೊತೆಗೆ ನೇರ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.
ವಾರ್ಷಿಕ ಲಕ್ಷ ಲಕ್ಷ ಆದಾಯ ಸಂಪಾದನೆ.. ಇದಲ್ಲದೆ ನೇರ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಸಂಪಾದನೆ ಮಾಡಿದ್ರು. ಅಲ್ಲದೆ, ವಾರ್ಷಿಕ 4 ರಿಂದ 5 ಲಕ್ಷ ಲಾಭ ಗಳಿಕೆ ಮಾಡುತ್ತಿದ್ದಾರೆ. ಕೃಷಿಯಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎನ್ನುವವರು ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಶಾಂತಮ್ಮ ಕೃಷಿಯಲ್ಲಿ ಸಾಧನೆ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಕಾಯಕವೇ ಕೈಲಾಸ ಎಂಬಂತೆ ಕೆಲಸದಲ್ಲಿ ಮಗ್ನರಾಗಿ ಜಾಣ್ಮೆಯಿಂದ ಕೃಷಿ ಮಾಡಿದ್ರೆ ಸಾಧನೆ ಮಾಡಬಹುದು ಎಂಬುದಕ್ಕೆ ಇವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎನ್ನುವ ಮಹಿಳೆಯರ ಮಧ್ಯೆ, ಈ ಶಾಂತಮ್ಮ ಪುರುಷರಿಗಿಂತ ಕೃಷಿಯಲ್ಲಿ ಅತಿ ಹಚ್ಚು ಲಾಭ ಮಾಡಿಕೊಂಡು ಇತರ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ದಿನದಂದು ಸಾಧಕಿ ಶಾಂತಮ್ಮಗೆ ಸೆಲ್ಯೂಟ್ ಹೇಳೋಣ..
ಇದನ್ನೂ ಓದಿ: 20 ಚಕ್ರದ ವಾಹನವನ್ನೂ ಲೀಲಾಜಾಲವಾಗಿ ಓಡಿಸಬಲ್ಲರು ಹಾವೇರಿಯ ಶೋಭಾ ತೋಟದ!