ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ ರಾಜಕೀಯವಾಗಿ ಪುನರ್ ಜನ್ಮ ನೀಡಿದ ರೇಷ್ಮೆನಗರಿ ರಾಮನಗರದಲ್ಲಿ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಪಂಚರತ್ನ ರಥಯಾತ್ರೆಗೆ ಅದ್ಧೂರಿಯಾಗಿ ಎಲ್ಲೆಡೆ ಸ್ವಾಗತ ದೊರೆಯುತ್ತಿದ್ದಂತೆ ಇತ್ತ ತಮ್ಮ ಸ್ವ ಕ್ಷೇತ್ರದಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ಕಂಡುಬಂತು.
ಹುಟ್ಟುಹಬ್ಬದ ನಿಮಿತ್ತ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನ ಏರ್ಪಡಿಸಿದ್ದರು. ಸಂಜೆ 6 ಗಂಟೆಗೆ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದಂಪತಿ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಇದಲ್ಲದೆ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಊಟಕ್ಕೆ ಫಲಾವ್, ಮೊಸರನ್ನ, ಮೈಸೂರ್ ಪಾಕ್ ಸ್ವೀಟ್ ಮಾಡಲಾಗಿತ್ತು ಹಾಗೆಯೇ ಸಂಜೆ ಕಲ್ಯಾಣೋತ್ಸವ ಬಳಿಕ ತಿರುಪತಿ ಲಡ್ಡು ಪ್ರಸಾದ, ಪುಳಿಯೋಗರೆ ಹಾಗೂ ಕೇಸರಿ ಬಾತ್ ವಿತರಣೆ ಮಾಡಲಾಯಿತು. ಹಾಗೆಯೇ ಮಹಿಳೆಯರಿಗೆ ಅರಿಶಿಣ ಕುಂಕುಮ, ಬ್ಲೌಸ್ ಪೀಸ್, ತಾಂಬೂಲ ವ್ಯವಸ್ಥೆ ಮಾಡಲಾಗಿತ್ತು.
ಕೇಕ್ ಕಟ್ ಮಾಡಿಸಿದ ಅಭಿಮಾನಿಗಳು: ರಾಮನಗರದಲ್ಲಿ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೆ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿಮಾನಿಗಳ ಸಮ್ಮುಖದಲ್ಲಿ ಜನ್ಮದಿನದ ಕೇಕ್ ಕತ್ತರಿಸಿದರು. ಹಾಗೆಯೇ ಬಾದಾಮಿ ಹಾರ ಹಾಕಿ ಆತ್ಮೀಯವಾಗಿ ಸತ್ಕರಿಸಿದರು.

ತಿರುಪತಿ ಮೂಲ ವಿಗ್ರಹ ಮೆರವಣಿಗೆ: ಇದೇ ಸಂದರ್ಭದಲ್ಲಿ ತಿರುಪತಿ ಮೂಲ ವಿಗ್ರಹಗಳ ಪುರ ಪ್ರವೇಶ ಮೆರವಣಿಗೆ ಮಾಡಲಾಯಿತು. 11ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಇದಲ್ಲದೆ ಜನರು ಕೂಡ ದೇವರ ಮೂಲ ವಿಗ್ರಹಗಳನ್ನು ಕಾಣಲು ತವಕದಿಂದ ಇದ್ದು ದಾರಿಯುದ್ದಕ್ಕೂ ಗೋವಿಂದ ನಾಮ ಜಪ ಮಾಡಲಾಯಿತು. ಮೂಲ ದೇವರನ್ನು ಕೆಂಪೇಗೌಡ ಸರ್ಕಲ್ನಿಂದ ಮೆರವಣಿಗೆ ಮೂಲಕ ಐಜೂರು ವೃತ್ತ, ಹಳೆ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ರಸ್ತೆ, ಎಂಜಿ ರಸ್ತೆಯಾಗಿ ವೇದಿಕೆಗೆ ತರಲಾಯಿತು. ಜನರೂ ಕೂಡ ಶ್ರೀನಿವಾಸ, ಭೂದೇವಿ, ಶ್ರೀದೇವಿ ಮೂಲ ಮೂರ್ತಿಯನ್ನು ಕಾಣಲು ಜನರು ಉತ್ಸುಕರಾಗಿದ್ದರು.
ಚಾಮುಂಡಿ, ದರ್ಗಾ ಹಾಗೂ ಚರ್ಚ್ನಲ್ಲಿ ಪೂಜೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬದ ನಿಮಿತ್ತ ರಾಮನಗರದ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಹಾಗೂ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹಾಗೆಯೇ, ನಗರದ ಹಜರತ್ ಫೀರೆನ್ ಷಾ ವಾಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಕೆ ನಂತರ ಲೂರ್ದು ಮಾತಾ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಹಾಗೆಯೇ ಮಾಜಿ ಸಿಎಂ ಹೆಚ್‌ಡಿಕೆ 64ನೇ ಜನ್ಮದಿನ ಹಿನ್ನೆಲೆಯಲ್ಲಿ ದೇವಾಲಯದ ಬಳಿ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಲಾಯಿತು. ಸುಮಾರು 10 ಕೆಜಿ ಕೇಕ್ ತಯಾರಿಸಿ ತಂದ ಅಭಿಮಾನಿಗಳು, ಮಾಜಿ ಸಿಎಂ ಹೆಚ್‌ಡಿಕೆ ಅಭಿವೃದ್ಧಿ ಕಾರ್ಯಗಳು ಉಲ್ಲೇಖ ಹಾಗೂ ಸಾರಾಯಿ, ಲಾಟರಿ ನಿಷೇಧ, ಗ್ರಾಮ ವಾಸ್ತವ್ಯ, ಜನತಾ ದರ್ಶನ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯದ ಉಲ್ಲೇಖ ಸೇರಿ ಕೇಕ್ನಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬರೆಯಲಾಗಿತ್ತು.
ಇದನ್ನೂ ಓದಿ: ಕುಟುಂಬದ ಜೊತೆ ಸರಳವಾಗಿ ಜನ್ಮದಿನ ಆಚರಿಸಿಕೊಂಡ ಹೆಚ್‌ಡಿಕೆ