ರಾಮನಗರ: ಮಾಗಡಿ ತಾಲ್ಲೂಕಿನ ಗವಿನಾಗಮಂಗಲದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರು ಮಂದಿಯನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಆರು ಎಸ್ಬಿಎಂಎಲ್ ನಾಡ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಗಡಿ ತಾಲೂಕಿನ ಗವಿನಾಗಮಂಗಲ ನಿವಾಸಿ ಧ್ರುವಾಚಾರ್ (52) ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಆತ ಮನೆಯಲ್ಲೇ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ. ಈತನಿಂದ ಬಂದೂಕು ಖರೀದಿ ಮಾಡಿದ್ದ ಅದೇ ಗ್ರಾಮದ ಪುಟ್ಟರಾಜು ಎಂಬುವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ನೀಡಿದ ಸುಳಿವು ಆಧರಿಸಿ ದಬ್ಬಗುಳಿ ನಿವಾಸಿ ಮಾರೇಗೌಡ, ಸೊನ್ನೇನಹಳ್ಳಿ ನಿವಾಸಿ ಮುನಿಯಾ, ತಾವರೆಕೆರೆ ಹೋಬಳಿಯ ಕೆಂಪಗೊಂಡನಹಳ್ಳಿ ನಿವಾಸಿ ಪುಟ್ಟಯ್ಯ, ಬೆಂಗಳೂರು ಉತ್ತರ ತಾಲೂಕಿನ ಅರ್ಕಾವತಿ ನಗರ ನಿವಾಸಿ ಮುನಿರಾಜು ಎಂಬುವರನ್ನು ಪೊಲೀಸರು ಬಂಧಿಸಿ, ಅವರಿಂದ ತಲಾ ಒಂದೊಂದು ಬಂದೂಕು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.