ರಾಮನಗರ : ರೇಷ್ಮೆನಗರಿ ಜಿಲ್ಲೆಯ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಕೊನೆಯೇ ಇಲ್ಲ. ಪದೇಪದೆ ರೇಷ್ಮೆಗೂಡಿನ ಬೆಲೆ ಇಳಿದಾಗ ರೈತರು ಬೀದಿಗಿಳಿದು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ಫೆಬ್ರುವರಿ 1ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ರೇಷ್ಮೆಗೆ ಬೆಂಬಲ ಬೆಲೆ ನಿಗದಿ, ಹೈಟೆಕ್ ಮಾರುಕಟ್ಟೆ ಸ್ಥಾಪನೆ, ದಳ್ಳಾಳಿ ಹಾವಳಿ ಕಡಿವಾಣ ಸೇರಿ ಹಲವು ಯೋಜನೆಗಳಿಗೆ ಸಿಹಿ ಸುದ್ದಿ ಸಿಗಲಿದೆಯಾ ಎಂಬುದನ್ನು ಕಾದು ನೊಡಬೇಕಿದೆ.
ಇದನ್ನೂ ಓದಿ...ಸುಪ್ರೀಂಕೋರ್ಟ್ ಸಚಿವ ಸ್ಥಾನಕ್ಕೆ ತಡೆ ನೀಡಿದ ಆದೇಶ ಪಾಲಿಸುತ್ತೇನೆ: ಹೆಚ್.ವಿಶ್ವನಾಥ್
ಏಷ್ಯಾ ಖಂಡದಲ್ಲೇ ಅತಿದೊಡ್ಡ 2ನೇ ರೇಷ್ಮೆ ಮಾರುಕಟ್ಟೆ ಇರುವುದು ಈ ಜಿಲ್ಲೆಯ ಹೆಗ್ಗಳಿಕೆ. ಪ್ರತಿದಿನಕ್ಕೆ ಸಾವಿರಾರು ಟನ್ ರೇಷ್ಮೆಗೂಡಿನ ವಹಿವಾಟು ಈ ಮಾರುಕಟ್ಟೆಯಲ್ಲಿ ಆಗುತ್ತದೆ. ಕೇವಲ ರಾಮನಗರ ಜಿಲ್ಲೆಯಿಂದ ಮಾತ್ರವಲ್ಲದೆ ಚಾಮರಾಜನಗರ, ಮೈಸೂರು, ತುಮಕೂರು, ಕೋಲಾರ ಸೇರಿ ಹಲವು ಜಿಲ್ಲೆಗಳಿಂದ ರೇಷ್ಮೆಗೂಡನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಈ ಮಾರುಕಟ್ಟೆ ಹೆಚ್ಚು ಪ್ರಸಿದ್ಧಿ ಪಡೆದಿದೆ.
ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು : ರೇಷ್ಮೆ ಬೆಳೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ಪ್ರೋತ್ಸಾಹ ಧನ ಜೊತೆಗೆ ಕೊರೊನಾ ಸಂದರ್ಭದಲ್ಲಿ ನಷ್ಟವಾಗಿರುವ ಬೆಳೆಗೆ ಪರಿಹಾರ ಘೋಷಿಸಬೇಕೆಂದು ರೇಷ್ಮೆ ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.
ರೇಷ್ಮೆಗೂಡಿನ ಧಾರಣೆಯು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ರೈತರನ್ನು ಕೈಹಿಡಿಯಬಹುದೆಂಬ ನಿರೀಕ್ಷೆ ರೈತರು ಇಟ್ಟುಕೊಂಡಿದ್ದಾರೆ.
ಈ ಹಿಂದೆ ಸರ್ಕಾರದಿಂದ ರೇಷ್ಮೆ ಬೆಳೆಗಾರರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನ ಕೂಡ ನಿಲ್ಲಿಸಲಾಗಿದೆ. ರಾಮನಗರದಲ್ಲಿ ಉತ್ಪಾದನೆಯಾಗುವ ರೇಷ್ಮೆಗೂಡು ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಕೊಳ್ಳೇಗಾಲ, ಮೈಸೂರು ಹಾಗೂ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಮಾರಾಟವಾಗುತ್ತಿದೆ.
ಕಳೆದ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಪ್ರತಿ ಕೆಜಿ ರೇಷ್ಮೆಗೂಡಿಗೆ ₹500-₹600 ಬೆಲೆ ಸಿಗುತ್ತಿತ್ತು. ಆದರೀಗ ಗೂಡಿನ ಏರಿಳಿತವಾದಾಗ ಪ್ರತಿ ಕೆಜಿ ರೇಷ್ಮೆ ಗೂಡಿನ ಬೆಲೆ ₹100-₹200ಕ್ಕೆ ಕುಸಿದು ರೈತರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಬಜೆಟ್ನಲ್ಲಿ ರೈತರ ನಿರೀಕ್ಷೆಗಳೇನು? |
ರೇಷ್ಮೆಗೂಡಿಗೆ ಕಾಯಂ ಬೆಂಬಲ ಬೆಲೆ ನಿಗದಿಯಾಗಬೇಕು |
ಹೈಟೆಕ್ ರೇಷ್ಮೆ ಮಾರುಕಟ್ಟೆ ಜಿಲ್ಲೆಯಲ್ಲಿ ಆಗಬೇಕು |
ಗೂಡನ್ನು ಮಾರಾಟ ಮಾಡಲು ಬರುವ ರೈತರಿಗೆ ವಸತಿ ಸೌಲಭ್ಯ |
ದಳ್ಳಾಳಿಗಳ ಹಾವಳಿಗೆ ಕಡಿವಾಣ |
ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು |
ಪದೇಪದೆ ಗೂಡಿನ ಬೆಲೆ ಕಡಿಮೆ ಆಗದಂತೆ ಕ್ರಮವಹಿಸುವುದು |
ಗೂಡನ್ನು ಶೇಖರಣೆ ಮಾಡುವ ಮಾರುಕಟ್ಟೆ ಸ್ಥಾಪನೆ |
ಸರ್ಕಾರವು ಬೇರೆ ಬೆಳೆಗಳಿಗೆ ನೀಡುವ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೇಷ್ಮೆ ಬೆಳೆಗೆ ನೀಡುತ್ತಿಲ್ಲದಿರುವುದು ಸಹ ರೇಷ್ಮೆ ಬೆಳೆಗಾರರನ್ನು ಅಸಹನೀಯ ಸ್ಥಿತಿಗೆ ತಲುಪಿಸಿದೆ. ಜೊತೆಗೆ ಬೆಲೆ ಸಿಗದ ಸಂದರ್ಭದಲ್ಲಿ ಹಿಪ್ಪುನೇರಳೆ ಗಿಡಗಳನ್ನು ಬೇರು ಸಮೇತ ಕೀಳುವ ಹಂತಕ್ಕೆ ರೈತರು ತಲುಪಿರುವುದು ಕೂಡ ಇಲ್ಲಿ ಗಮನಾರ್ಹ. ಪದೇಪದೆ ಗೂಡಿನ ಬೆಲೆ ಇಳಿಯುತ್ತಿರುವುದು ಇದನ್ನೇ ನಂಬಿ ಬಂದ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತ ಮುಖಂಡರು.