ರಾಮನಗರ: ನಿರ್ಮಾಪಕ, ಮ್ಯಾನೇಜರ್ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನಿನ್ನೆ ಬಿಡದಿಯಲ್ಲಿ ಫೈಟರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ಪಿ ಗಿರೀಶ್ ಹೇಳಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ವೇಳೆ ನಿರ್ಮಾಪಕ ಸ್ಥಳದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಜಮೀನು ಮಾಲೀಕ ರೈತ ಆಗಿದ್ದರಿಂದ ಆತನಿಗೆ ಈ ಶೂಟಿಂಗ್ ವಿಷಯ ಗೊತ್ತಿರಲಿಲ್ಲ. ಆದರೆ, ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕಿತ್ತು. ನಿರ್ದೇಶಕ ಸಹ ಅನುಮತಿ ಪಡೆಯಬೇಕಿತ್ತು. ಚಿತ್ರತಂಡದಿಂದ ಆ ಕೆಲಸ ಆಗದ ಹಿನ್ನೆಲೆ ಅವರ ವಿರುದ್ಧ ಕೂಡ ಸುಮೊಟೋ ಕೇಸ್ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ನಿನ್ನೆ ತಡರಾತ್ರಿವರೆಗೆ ಮೃತರ ಪೋಷಕರು ಯಾರು ದೂರು ಕೊಡಲು ಮುಂದಾಗಲಿಲ್ಲ. ಕಾಂಪ್ರಮೈಸ್ ಆಗುವ ಸೂಚನೆಯಿತ್ತು. ಹಾಗಾಗಿ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತ್ತೊಂದೆಡೆ ಲವ್ ಯು ರಚ್ಚು ಸಿನಿಮಾ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಹ್ಯೂಮನ್ ರೈಟ್ಸ್ ನಿಂದ ರಾಮನಗರ ಎಸ್ಪಿಗೆ ದೂರು ನೀಡಲಾಗಿದೆ. ಸಾಹಸ ಕಲಾವಿದ ವಿವೇಕ್ ಸಾವು ಹಿನ್ನೆಲೆ ಚಿತ್ರನಟ ಅಜಯ್ ರಾವ್, ನಟಿ ರಚಿತಾ ರಾಮ್ ಬಂಧಿಸುವಂತೆ ಆಗ್ರಹಿಸಿ ದೂರು ನೀಡಲಾಗಿದೆ. ಈ ಬಗ್ಗೆ ಎಸ್ಪಿ ಎಸ್. ಗಿರೀಶ್ ಅವರಿಗೆ AICC ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂ.ಜೆ. ಗಿರೀಶ್ ಅವರು ಮನವಿ ಮಾಡಿದ್ದಾರೆ.
ಸೋಮವಾರ ಜಿಲ್ಲೆಯ ಬಿಡದಿಯ ಜೋಗಿನದೊಡ್ಡಿ ಬಳಿ ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ಅವಘಡ ಸಂಭವಿಸಿ ತಮಿಳುನಾಡು ಮೂಲದ ಫೈಟರ್ ವಿವೇಕ್ (28) ಮೃತಪಟ್ಟಿದ್ದರು.
ಓದಿ: ಸಿನಿಮಾ ಶೂಟಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್: 'ಲವ್ ಯೂ ರಚ್ಚು' ಸಿನಿಮಾ ಫೈಟರ್ ಸಾವು