ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕೊಟ್ಟಗಾಣಹಳ್ಳಿಯ ಗಂಗಮ್ಮ(62) ಎಂಬ ಮಹಿಳೆ ಚಿರತೆ ದಾಳಿಗೆ ಮೃತಪಟ್ಟಿದ್ದರು. ಈ ಹಿನ್ನೆಲೆ ಇಂದು ಅರಣ್ಯ, ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಅವರು ಭೇಟಿ ನೀಡಿ, ಪರಿಹಾರ ಘೋಷಿಸುವುದರ ಜೊತೆಗೆ ಸಾಂತ್ವನ ಹೇಳಿದ್ದಾರೆ.
ನಂತರ ಚಿರತೆ ದಾಳಿ ನಡೆಸಿದ ಸ್ಥಳ ಪರಿಶೀಲನೆ ನಡೆಸಿ, ಗ್ರಾಮಸ್ಥರಲ್ಲಿ ಧೈರ್ಯ ತುಂಬಿ, ಚಿರತೆ ಸೆರೆಗೆ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಂಜೆಯಾದ ನಂತರ ಒಂಟಿಯಾಗಿ ಓಡಾಡಬೇಡಿ. ರಾತ್ರಿ ವೇಳೆ ಪಡಸಾಲೆಗಳಲ್ಲಿ ಹಾಗೂ ಮನೆಯಿಂದ ಹೊರಗೆ ನಿದ್ರೆ ಮಾಡಬೇಡಿ. ಸಂಜೆ ವೇಳೆ, ಪಟಾಕಿ ಸಿಡಿಸಿ ಎಂದು ಸಲಹೆ ನೀಡಿದರು.
ಇದೇ ವೇಳೆ, ಮೃತರ ಕುಟುಂಬಕ್ಕೆ 10ಲಕ್ಷ ರೂ. ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟ ಇರುವುದರಿಂದಾಗಿ 7.5 ಲಕ್ಷ ರೂ ಪರಿಹಾರ ಮಂಜೂರು ಮಾಡಲಾಗಿದೆ ಎಂದರು.
ಗಸ್ತಿಗೆ ಗ್ರಾಮಸ್ಥರ ಒತ್ತಾಯ : ಗ್ರಾಮದ ಜನರು ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬೋನುಗಳನ್ನು ಇಡುವಂತೆ ಕೋರಿದ್ದು, ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ವತಿಯಿಂದ ಹಾನಿ ನಡೆದ ಸ್ಥಳಗಳಲ್ಲಿ ಕ್ಯಾಮೆರಾ ಹಾಗೂ ಬೋನುಗಳನ್ನು ಅಳವಡಿಸಲಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.