ರಾಮನಗರ: ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಮಾಡಬೇಕೆಂದು ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಂದು ಬೃಹತ್ ಯೋಜನೆಯನ್ನ ರೂಪಿಸಲಾಗಿತ್ತು. ಆದರೆ ಗುತ್ತಿಗೆದಾರರ ಆತುರ ಮತ್ತು ದುರಾಸೆಯಿಂದ ಈಗ ಅದೇ ಯೋಜನೆ ಕೆಲವರಿಗೆ ಕಂಟಕವಾಗಿ ಪರಿಣಮಿಸಿದೆ.
ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಜಲಾಶಯಕ್ಕೆ ಗುರುತ್ವಾಕರ್ಷಣೆ ಮೂಲಕ ಮಂಡ್ಯ ಜಿಲ್ಲೆ ಕೊಳ್ಳೇಗಾಲದ ಸತ್ತೇಗಾಲ ಸೇತುವೆಯಿಂದ ಕಾವೇರಿ ನೀರನ್ನ ಲಿಫ್ಟ್ ಮೂಲಕ ತರುವ ಮಹತ್ವದ ಯೋಜನೆಯನ್ನು ಕಳೆದ ಸಮ್ಮಿಶ್ರ ಸರ್ಕಾರ ರೂಪಿಸಿತ್ತು. ರಾಮನಗರ-ಚನ್ನಪಟ್ಟಣ ತಾಲೂಕುಗಳಿಗೆ ಒಳಪಡುವ ಕಣ್ವ ಜಲಾಶಯ ಹಾಗೂ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯಕ್ಕೆ ಇಗ್ಗಲೂರಿನಿಂದ ನೀರನ್ನ ಲಿಫ್ಟ್ ಮಾಡಿ ಆ ಮೂಲಕ ಇಡೀ ಜಿಲ್ಲೆಗೆ ಕಾವೇರಿ ನೀರನ್ನ ಪೂರೈಕೆ ಮಾಡುವ ಯೋಜನೆಗೆ 540 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು.
ಈಗ ಕಾಮಗಾರಿ ಕೂಡ ಪ್ರಾರಂಭವಾಗಿದೆ. ಆದರೆ ಕಣ್ವ ಜಲಾಶಯದ ಬಳಿ ಪಂಪ್‌ಹೌಸ್ ನಿರ್ಮಾಣ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಸುರಂಗ ತೋಡುವಾಗ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕು. ಆದರೆ ಈ ಕೆಲಸ ಮಾಡ್ತಿರುವ ಖಾಸಗಿ ಏಜೆನ್ಸಿಯವರು ಯಾವುದೇ ಸುರಕ್ಷಿತ ಕ್ರಮವಹಿಸದೇ ಬೇಕಾಬಿಟ್ಟಿ ಭೂಮಿಯಲ್ಲಿರುವ ಬಂಡೆಗಳನ್ನ ಸಿಡಿಸುತ್ತಿರುವ ಪರಿಣಾಮ ಗ್ರಾಮದಲ್ಲಿರುವ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ನಮಗೆ ಸಂಬಂಧಪಟ್ಟವರು ಭದ್ರತೆ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಭೂಮಿಯಲ್ಲಿ ಸಿಗುವ ಬಂಡೆಗಳನ್ನ ಹಿಟಾಚಿಯ ಬ್ರೇಕ್‌ಲೈನರ್‌ನಿಂದ ನಿಧಾನವಾಗಿ ಹೊಡೆಯಬೇಕು. ಆದರೆ ಗುತ್ತಿಗೆ ಪಡೆದಿರುವ ಏಜೆನ್ಸಿಯವರು ಮಾತ್ರ ತಮ್ಮ ಕೆಲಸ ಬೇಗ ಆಗಲಿ ಎಂಬ ಕಾರಣಕ್ಕೆ ಡೈನಾಮೆಂಟ್ ಇಟ್ಟು ರಾತ್ರಿ ಸಮಯದಲ್ಲಿ ಬ್ಲಾಸ್ಟ್ ಮಾಡುತ್ತಾರೆ. ಆಗ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಚೆನ್ನಾಗಿದ್ದ ಮನೆಗಳು ಬಿರುಕು ಬಿಡುತ್ತಿವೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೆ ಪಂಪ್‌ಹೌಸ್ ನಿರ್ಮಾಣದ ಜಾಗಕ್ಕೆ ಬಂದು ಹೋಗಿದ್ದು ಬಿಟ್ಟರೆ, ನಮ್ಮ ಮನೆಯ ಬಳಿ ಬರಲಿಲ್ಲ ಎನ್ನುವುದು ಮನೆ ಮಾಲೀಕರ ಅಸಮಾಧಾನವಾಗಿದೆ.
ಭಾಗ್ಯಮ್ಮ ಹಾಗೂ ವೆಂಕಟೇಶ್ ದಂಪತಿ ಇದೇ ವಿಚಾರಕ್ಕೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಪರಿಣಾಮ ರಾಮನಗರ ಗ್ರಾಮಾಂತರ ಪಿಎಸ್‌ಐ ಲಕ್ಷ್ಮಣಗೌಡ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಗ್ರಾಮಸ್ಥರಿಂದ ವರದಿ ಪಡೆದಿದ್ದಾರೆ. ಕುಡಿಯುವ ನೀರಾವರಿ ಯೋಜನೆಯ ಕಾಮಗಾರಿ ನಡೆಯುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಆದರೆ ಈ ಯೋಜನೆಯಿಂದ ಯಾರಿಗೂ ತೊಂದರೆಯಾಗದಿರಲಿ ಎಂದು ಕಣ್ವ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಕಾವೇರಿ ನೀರಾವರಿ ನಿಗಮ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದಾರೆ.