ರಾಮನಗರ : ಮೂರು ದಿನದ ಹಿಂದೆ ರಾಮನಗರದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಎಎಸ್ಐ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ವಿವೇಕಾನಂದನಗರ ನಿವಾಸಿಯಾಗಿರುವ ನಿವೃತ್ತ ಎಎಸ್ಐ ಚೆನ್ನಿಗಪ್ಪ ಇವರ ಇಬ್ಬರು ಮಕ್ಕಳಾದ ಪ್ರದೀಪ್ ಹಾಗೂ ವಿಜಯ್ನನ್ನು ಐಜೂರು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಏನಿದು ಘಟನೆ : ಮೈಸೂರು ಮೂಲದ ಪ್ರಕಾಶ್ ಎಂಬುವನು ರಾಮನಗರದ ಮೂಲದ ತನ್ನ ಸ್ನೇಹಿತನಾದ ಪ್ರದೀಪ್ಗೆ 18 ಲಕ್ಷ ರೂ.ಗಳನ್ನು ನೀಡಿದ್ದ. ಇವರಿಬ್ಬರ ತಂದೆಯರು ಸಹ ನಿವೃತ್ತ ಎಎಸ್‌ಐಗಳೇ ಆಗಿರುವುದು ವಿಶೇಷ. ಈ ಇಬ್ಬರು ಸ್ನೇಹಿತರ ಗಲಾಟೆ ಮಾಡಿಕೊಂಡು, ಹಣ ಹಿಂದಿರುಗಿಸಲು ಪ್ರದೀಪ್ ಸತಾಯಿಸುತ್ತಿದ್ದ ಎನ್ನಲಾಗಿದೆ.
ರಾಮನಗರ ವಿದ್ಯಾನಗರದ ನಿವಾಸಿಯಾದ ಹರೀಶ್ಗೆ ಹಣ ವಾಪಸ್ ಕೊಡಿಸಲು ಪ್ರಕಾಶ್ ಡೀಲ್ ನೀಡಿದ್ದ. ಹರೀಶ್ ಒಂದಷ್ಟು ಹುಡುಗರ ಗುಂಪು ಕಟ್ಟಿಕೊಂಡು ಶನಿವಾರ ರಾತ್ರಿ ರಾಮನಗರದ ರಾಮಕೃಷ್ಣ ಆಸ್ಪತ್ರೆ ಬಳಿ ಪ್ರದೀಪ್ ಹತ್ತಿರ ಜಗಳ ಶುರು ಮಾಡಿದ್ದಾನೆ.
ಈ ವೇಳೆ ಮೂವರು ಆರೋಪಿಗಳು, ಹರೀಶ್ ಮತ್ತು ಲೋಕೇಶ್ಗೆ ಚಾಕು ಚುಚ್ಚಿ ಪರಾರಿಯಾಗಿದ್ದರು. ಹರೀಶ್ ಸ್ಥಳದಲ್ಲೇ ಮೃತ ಪಟ್ಟಿದ್ರೆ, ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ನಿಮಿತ್ತ ಪೊಲೀಸರು ನಿವೃತ್ತ ಎಎಸ್ಐ ಮತ್ತು ಅವರ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.