ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆ ಮತ್ತೆ ಜಲಾವೃತಗೊಂಡಿದೆ. ಶನಿವಾರ ಸುರಿದ ಧಾರಾಕಾರ ಮಳೆಗೆ ಕೆರೆ ಕಟ್ಟೆಗಳು ಕೋಡಿಬಿದ್ದಿವೆ. ಪರಿಣಾಮ ಚನ್ನಪಟ್ಟಣ ನಗರದ ಬೀಡಿ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅನೇಕ ವಸ್ತುಗಳು, ಆಹಾರ ಸಾಮಗ್ರಿಗಳು ನೀರುಪಾಲಾಗಿದ್ದು, ಸ್ಥಳೀಯ ನಿವಾಸಿಗಳ ಸಂಕಷ್ಟ ಹೇಳತೀರದಂತಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದ ಈ ಬಡಾವಣೆ ಸಂಪೂರ್ಣ ಜಲಾವೃತಗೊಂಡಿತ್ತು. ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ, ಸಂಸದ ಡಿ ಕೆ ಸುರೇಶ್, ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್, ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೆ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದ್ರೆ, ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ.
ಇದನ್ನೂ ಓದಿ: ದಾವಣಗೆರೆಯಲ್ಲಿ ಧಾರಾಕಾರ ಮಳೆ: ನೆಲಕ್ಕುರುಳಿದ 27 ಮನೆ.. ಜನರ ಜೀವನ ಅಯೋಮಯ
ಕೂಲಿ ಕಾರ್ಮಿಕರೇ ಹೆಚ್ಚು ವಾಸಿಸುವ ಈ ಬಡಾವಣೆಯಲ್ಲಿ ಪ್ರತಿ ಬಾರಿ ಮಳೆ ಬಂತೆಂದರೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಮತ್ತೊಂದೆಡೆ, ಮಂಚನಬೆಲೆ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಅರ್ಕಾವತಿ ನದಿ ಕೂಡ ತುಂಬಿ ಹರಿಯುತ್ತಿದ್ದು, ರಾಮನಗರ ಪಟ್ಟಣದ ಹಲವು ಬಡಾವಣೆಗೆ ನೀರು ನುಗ್ಗಿ ಜನತೆ ಆತಂಕದಲ್ಲಿದ್ದಾರೆ. ಹಾಗೆಯೇ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಬೃಹತ್ ಲಾರಿಯೊಂದು ನೀರಿನ ಮಧ್ಯೆ ಸಿಲುಕಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ.
ಇದನ್ನೂ ಓದಿ: ರಾತ್ರಿ ಸುರಿದ ಮಳೆಗೆ ಗಡಿಜಿಲ್ಲೆ ಚಾಮರಾಜನಗರ ತತ್ತರ: ಗ್ರಾಮಗಳು ಜಲಾವೃತ
ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮತ್ತು ಅಧಿಕಾರಿಗಳು ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜೆಸಿಬಿ ಮೂಲಕ ಒಡೆದು ಬಡಾವಣೆಯಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರ ಬಿಡುತ್ತಿದ್ದಾರೆ.