ರಾಮನಗರ: ರಾಜ್ಯದ ಗ್ರಾಮೀಣ ಜೀವನೋಪಾಯ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ಇದೀಗ ಮತ್ತೊಂದು ದಿಟ್ಟಹೆಜ್ಜೆಯನ್ನು ಇರಿಸಿದ್ದು, ಮನೆ, ಆಸ್ತಿಯ ಅಳತೆ, ತೆರಿಗೆ ಅಂದಾಜು ಮಾಡುವ ಮೂಲಕ ಕೋವಿಡ್-19 ಸಂಕಷ್ಟದ ಕಾಲದಲ್ಲೂ ಹೊಸ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಇದನ್ನು ವೀಕ್ಷಿಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮೂರು ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರು ಸರ್ವೇ ಕಾರ್ಯ ನಡೆಸುತ್ತಿದ್ದು, ಗ್ರಾಮೀಣ ಜೀವನೋಪಾಯ ಇಲಾಖೆ ಉಸ್ತುವಾರಿ ಹೊಂದಿರುವ ಡಿಸಿಎಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಆ ಮಹಿಳೆಯರ ಜತೆಸಂವಾದ ನಡೆಸಿದರು. ನಂತರ ಮಾತನಾಡಿದ ಡಿಸಿಎಂ, ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆಯಲ್ಲಿ ಮಾಡಲಾಗಿರುವ ಈ ಪ್ರಯತ್ನವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವಾಲಯದ ಜೊತೆ ಚರ್ಚಿಸಿ ಈ ಅಭಿಯಾನವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆಯಲಾಗುವುದು ಎಂದರು.
ಗ್ರಾಮೀಣ ಮಹಿಳೆಯರ ದಿಟ್ಟತನ, ಸ್ವಾವಲಂಬನೆಯ ಹೆಗ್ಗುರಿಗೆ ಇದೊಂದು ಉತ್ತಮ ಉದಾಹರಣೆ. ಇನ್ನು ಮುಂದೆ ರಾಜ್ಯಾದ್ಯಂತ ಆಸ್ತಿಗಳ ಸರ್ವೆ, ತೆರಿಗೆ ಅಂದಾಜನ್ನು ಮಹಿಳೆಯರೇ ಮಾಡಲಿದ್ದಾರೆ. ಜತೆಗೆ ಮುಂದೆ ಆಸ್ತಿತೆರಿಗೆಯನ್ನೂ ಮಹಿಳೆಯರೇ ಸಂಗ್ರಹಿಸಲಿದ್ದಾರೆ ಎಂದು ಡಿಸಿಎಂ ಘೋಷಿಸಿದರು.
ಕೋವಿಡ್ ಬಿಕ್ಕಟ್ಟನ್ನು ಸದುಪಯೋಗ ಮಾಡಿಕೊಂಡಿರುವ ಈ ಮಹಿಳೆಯರು ಜಿಲ್ಲಾಡಳಿತದ ನೆರವಿನಿಂದ ಕೈಗೊಂಡಿರುವ ಈ ಜೀವನೋಪಾಯ ಚಟುವಟಿಕೆ ಆರ್ಥಿಕವಾಗಿಯೂ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಇವರೆಲ್ಲರೂ ಮಾಸಿಕ ತಲಾ 15ರಿಂದ 20 ಸಾವಿರ ರೂ. ಆದಾಯ ಗಳಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿ, ನಿಮ್ಮ ಪ್ರಯತ್ನದಿಂದ ನನ್ನ ಮನಸ್ಸು ತುಂಬಿ ಬಂದಿದೆ. ಆರ್ಥಿಕವಾಗಿ ಸಬಲರಾಗಬೇಕು ಎಂಬ ನಿಮ್ಮ ಉದ್ದೇಶ ಅತ್ಯಂತ ಉತ್ತಮವಾದದ್ದು. ನಿಮಗೆ ಬೇಕಿರುವ ಎಲ್ಲ ಸವಲತ್ತುಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ನಿಮ್ಮ ಉನ್ನತಿಯಲ್ಲೇ ರಾಜ್ಯ, ದೇಶದ ಉನ್ನತಿ ಅಡಗಿದೆ ಎಂದು ನುಡಿದರು.
ಇದೇ ವೇಳೆ ಅಭಿಯಾನದ ನಿರ್ದೇಶಕಿ ಡಾ. ಬಿ.ಆರ್. ಮಮತಾ ಮಾತನಾಡಿ, ಸ್ವಸಹಾಯ ಗುಂಪುಗಳಲ್ಲಿ ಜೀವನೋಪಾಯ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮಹಿಳೆಯರು, ಜಿಲ್ಲೆಯ ಕಂಚುಗಾರನಹಳ್ಳಿ, ಲಕ್ಷ್ಮೀಪುರ ಮತ್ತು ಬನ್ನಿಕುಪ್ಪೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಸ್ತಿ ಸರ್ವೇ ಕೆಲಸವನ್ನು ಕೈಗೊಂಡಿದ್ದರು. ಜಿಲ್ಲೆಯ ಕಂದಾಯ ಇಲಾಖೆ ಇವರಿಗೆ ತಾಂತ್ರಿಕ ನೆರವು ನೀಡಿತ್ತು. ಇವರು ಸುಮಾರು 3,116 ಮನೆಗಳನ್ನು ಅಳತೆ ಮಾಡಿದ್ದು, ಪ್ರತಿಮನೆಯ ಅಳತೆಗೆ 50 ರೂ. ನಿಗದಿ ಮಾಡಲಾಗಿದೆ ಎಂದರು.
ಇಡೀ ರಾಜ್ಯದಲ್ಲಿಯೇ ಇದೊಂದು ವಿಭಿನ್ನ ಅಭಿಯಾನವಾಗಿದ್ದು, ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ, 10ನೇ ತರಗತಿ ಪಾಸಾಗಿರುವ ಕ್ರಿಯಾಶೀಲ ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದ ನಂತರ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇವರಿಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ತಂಡವು ಅಗತ್ಯ ಮಾರ್ಗದರ್ಶನ ನೀಡುತ್ತದೆ. ಈ ಪ್ರಯತ್ನದಿಂದ ಆಸ್ತಿ ತೆರಿಗೆ ಪ್ರಮಾಣ ಮುಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.