ರಾಮನಗರ: ಮಳೆಗಾಲದಲ್ಲಿ ಮನೆಯೊಳಗೆ ಚರಂಡಿ ನೀರು ನುಗ್ಗುತ್ತದೆ ಎಂದು ಆಧುನಿಕ ತಂತ್ರಜ್ಞಾನ ಬಳಸಿ ಮನೆಯನ್ನೇ ಲಿಫ್ಟ್ ಮಾಡಿರುವ ಜಿಲ್ಲೆಯ ಅಪರೂಪದ ಘಟನೆ ಚನ್ನಪಟ್ಟಣದ ವಿವೇಕಾನಂದ ನಗರದಲ್ಲಿ ಕಂಡುಬಂದಿದೆ.
ಮೂಲತಃ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದವರಾದ ವೆಂಕಟೇಶ್ ಹಾಗೂ ಸುಜಾತ ದಂಪತಿ ಇವರ ಹಾಲಿ ವಾಸ ಮಂಡ್ಯ ನಗರ. ಬಾಡಿಗೆ ನೀಡುವ ದೃಷ್ಟಿಯಿಂದ ಚನ್ನಪಟ್ಟಣದಲ್ಲಿ ಮನೆ ಕಟ್ಟಿಸಿದ್ದರು. ಆದರೆ ಕಾಲಕಳೆದಂತೆ ಮನೆಯ ಮುಂದಿರುವ ರಸ್ತೆಗೆ ಡಾಂಬರೀಕರಣವಾದ ಸಂದರ್ಭದಲ್ಲಿ ಮನೆಯ ಅಡಿಪಾಯ ಕೆಳಭಾಗಕ್ಕೆ ಸೇರಿಕೊಂಡಿತ್ತು. ಅಲ್ಲದೆ ಮನೆಯ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ಕಾರಣ ಒಂದು ಪೈಪ್‌ನಲ್ಲಿ ಕೊಳಚೆ ನೀರು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇವರ ಮನೆ ಕೆಳಭಾಗದಲ್ಲಿದ್ದ ಕಾರಣ ಮಳೆಯಾದಾಗ ಕೊಳಚೆ ನೀರೆಲ್ಲಾ, ಈ ಮನೆಯೊಳಗೆ ನುಗ್ಗುತ್ತಿತ್ತು. ಅಕ್ಕಪಕ್ಕದಲ್ಲಿದ್ದ ಮನೆಗಳು ಮೇಲ್ಭಾಗದಲ್ಲಿದ್ದ ಕಾರಣ ಯಾವ ಮನೆಗಳಿಗೂ ತೊಂದರೆಯಾಗುತ್ತಿರಲಿಲ್ಲ.
ಈ ಕಾರಣದಿಂದ ಮನೆಯನ್ನೇ ಮಾರಬೇಕೆಂಬ ತೀರ್ಮಾನಕ್ಕೆ ಕುಟುಂಬಸ್ಥರು ಬಂದಿದ್ದರು. ಆದರೆ ಕಷ್ಟಪಟ್ಟು ಮನೆಕಟ್ಟಿದ್ದ ಕಾರಣ ಮಾರಲು ಮನಸ್ಸು ಬರದ ಕಾರಣ, ಹರಿಯಾಣದ ಯಮುನಾ ನಗರದಲ್ಲಿನ ಹೊಸ ತಂತ್ರಜ್ಞಾನಕ್ಕೆ ಈ ಕುಟುಂಬಸ್ಥರು ಮೊರೆಹೋಗಿದ್ದಾರೆ.
ಏನಿದು ಹೌಸ್ ಲಿಫ್ಟ್:
ಹರಿಯಾಣದ ಯಮುನಾ ನಗರದಲ್ಲಿರುವ ಟಿ.ಡಿ.ವಿ.ಡಿ ಹೌಸ್ ಲಿಫ್ಟಿಂಗ್ ಸರ್ವೀಸ್ ಹೆಸರಿನ ಕಂಪನಿ ಈ ಹೊಸ ತಂತ್ರಜ್ಞಾನದ ಮೂಲಕ ಕಟ್ಟಿರುವ ಮನೆಗಳನ್ನ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಒಂದೆಡೆಯಿಂದ ಬೇರೆಡೆಗೆ ಹಾಗೂ ಸ್ಥಳದಲ್ಲಿಯೇ ಕೆಳಭಾಗದಿಂದ ಮೇಲ್ಭಾಗಕ್ಕೆ ಲಿಫ್ಟ್ ಮಾಡುವ ಕಾರ್ಯತಂತ್ರ ಮಾಡಲಾಗುತ್ತಿದೆ. ಇನ್ನು ಈ ಮನೆಯ ಕೆಲಸಕಾರ್ಯ ಮಾಡುತ್ತಿರುವವರು ಕೂಡ ಹರಿಯಾಣದ ಅದೇ ಕಂಪನಿಯ ಕಾರ್ಮಿಕರು ಎನ್ನುವುದು ವಿಶೇಷ. 30-40 ಅಡಿ ನಿವೇಶನದಲ್ಲಿ ಈ ಮನೆಯಿದ್ದು 1 ಅಡಿಗೆ 250 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಈ ಮನೆಯನ್ನ ಲಿಫ್ಟ್ ಮಾಡೋದಕ್ಕೆ ಬರೋಬ್ಬರಿ 6 ರಿಂದ 7 ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆಯಂತೆ.
ಈ ಕಂಪನಿಯವರು ಈಗಾಗಲೇ ಮೈಸೂರಿನಲ್ಲಿ ಒಂದು ಮನೆಯ ಜೊತೆಗೆ ದೇವಸ್ಥಾನವನ್ನು ಲಿಫ್ಟಿಂಗ್ ಮಾಡಿದ್ದಾರೆ. ಜೊತೆಗೆ ಚೆನ್ನೈನಲ್ಲಿ ಮೊದಲ ಬಾರಿಗೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಎಂದು ಟಿ.ಡಿ.ವಿ.ಡಿ ಹೌಸ್ ಲಿಫ್ಟಿಂಗ್ ಸರ್ವೀಸ್ ನ ಕಾರ್ಮಿಕ ನಂದು ಸಿಂಗ್ ಹೇಳಿದರು.
ಇಂತಹ ಸಾಹಸಕ್ಕೆ ಕೈಹಾಕುವ ಟಿ.ಡಿ.ವಿ.ಡಿ ಕಂಪನಿ ತಮ್ಮ ಕೆಲಸದ ನಂತರ 20 ವರ್ಷಗಳ ಗ್ಯಾರಂಟಿ ಕೊಡುತ್ತಾರೆ. ಈ ಸಂಬಂಧ ಮನೆ ಮಾಲೀಕರಿಗೆ ಅಗ್ರಿಮೆಂಟ್ ಪತ್ರ ಮಾಡಿಕೊಟ್ಟು ಕೆಲಸ ಮಾಡಿಕೊಡುತ್ತಾರೆ. ಜೊತೆಗೆ ಕೆಲಸ ನಡೆಯುವ ಸಂದರ್ಭದಲ್ಲಿ ಯಾವುದೇ ಡ್ಯಾಮೇಜ್ ಆದ್ರೂ ಸಹ ಅದಕ್ಕೆ ಕಂಪನಿಯೇ ಹೊಣೆ ಎಂಬುದನ್ನ ಒಪ್ಪಿಕೊಂಡೇ ಕೆಲಸ ಮಾಡಿಕೊಡುತ್ತಾರೆ. ಇದು ಸಂಚಾರಿಮನೆ ನಿರ್ಮಾಣವನ್ನೂ ಮೀರಿಸುವಂತಿದೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆದಯುತ್ತಿದೆ.