ರಾಮನಗರ: ರಾಜಕೀಯ ವೈಷಮ್ಯಕ್ಕೆ ಪ್ರತಿ ಬಜೆಟ್ನಲ್ಲೂ ಕೂಡ ರಾಮನಗರ ಜಿಲ್ಲೆಗೆ ಅನ್ಯಾಯವಾಗುತ್ತಲೇ ಇತ್ತು. ಆದರೆ ಈ ಬಾರಿ ಜಿಲ್ಲೆಯ ಜನತೆ ನೂರಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬನ್ನಿ ಜನರ ನಿರೀಕ್ಷೆಗಳೇನು ಎಂಬುದನ್ನು ನೋಡೋಣ.
ನೂರಾರು ನಿರೀಕ್ಷೆ ಇಟ್ಟುಕೊಂಡ ಕ್ಷೇತ್ರದ ಜನತೆ
ಹೌದು, ರಾಮನಗರ ಜಿಲ್ಲೆಯ ಜನತೆ ಈ ಬಜೆಟ್ನಲ್ಲಿ ನೂರಾರು ಭರವಸೆ, ಆಸೆಗಳನ್ನ ಇಟ್ಟುಕೊಂಡಿದ್ದಾರೆ. ಒಂದು ಕಾಲದ ಬ್ರಿಟಿಷರ ಕಾಲದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಅಂದಿನ ಕ್ಲೋಸ್ ಪೇಟ್ ಇಂದಿನ ರೇಷ್ಮೆ ನಗರಿ ರಾಮನಗರ ಜಿಲ್ಲೆಯಾಗಿದೆ. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯತ್ತ ಚಿತ್ತ ಹರಿಸಿದ್ದರು.
ನಂತರ ರಾಜಕೀಯ ಏರಿಳಿತಗಳ ನಡುವೆ ಕುಮಾರಸ್ವಾಮಿ ಅಧಿಕಾರದಿಂದ ಇಳಿದ ಮೇಲೆ ರಾಜ್ಯದಲ್ಲಿ 12 ಬಜೆಟ್ ಗಳನ್ನ ಮಂಡಿಸಲಾಗಿದೆ. ಆದ್ರೆ ಯಾವುದೇ ಬಜೆಟ್ ನಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿರಲೇ ಇಲ್ಲ. ಕಾರಣ ರಾಜಕೀಯ ವೈಷಮ್ಯ ಜೊತೆಗೆ ಕಳೆದ 11 ವರ್ಷಗಳಿಂತಲೂ ರಾಮನಗರ ಜಿಲ್ಲೆಗೆ ಮಲತಾಯಿ ಧೋರಣೆ ಜೊತೆಗೆ ಕ್ಷೇತ್ರದ ಶಾಸಕ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತಿದ್ದರು. ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನ ಸಂಪೂರ್ಣವಾಗಿ ಕಡೆಗಣಿಸಿಕೊಂಡು ಬರುತ್ತಲೇ ಇತ್ತು ಎಂಬ ಆರೋಪಗಳು ಈ ಭಾಗದಲ್ಲಿ ಕೇಳಿಬರುತ್ತಿವೆ.
ಈ ಬಾರಿ ಮತ್ತೊಮ್ಮೆ ಯಡಿಯೂರಪ್ಪ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ರಾಜಕೀಯವಾಗಿ ಗುದ್ದಾಡಿಕೊಂಡ್ರು ಕೂಡ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಒಂದಾಗುತ್ತಾರೆ. ಅಂತೆಯೇ ಈ ಬಾರಿಯ ಬಜೆಟ್ನಲ್ಲೂ ರಾಮನಗರ ಜಿಲ್ಲೆಯ ಅಭಿವೃದ್ಧಿ ವಿಷಯಕ್ಕೆ ಹೆಚ್ಡಿಕೆ ಮಾತಿಗೆ ಹಾಲಿ ಸಿಎಂ ಯಡಿಯೂರಪ್ಪ ಎಂದೂ ಕೂಡ ಇಲ್ಲ ಅಂದಿಲ್ಲ. ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜಿಲ್ಲೆಗೆ ತಂದಿದ್ದ ಅನುದಾನವನ್ನ ಸಂಪೂರ್ಣವಾಗಿ ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಕೂಡ ಬಿಎಸ್ ವೈ ಗೆ ಕುಮಾರಸ್ವಾಮಿ ಸಾಥ್ ನೀಡುತ್ತಲೇ ಇದ್ದಾರೆ.
ನವ ಬೆಂಗಳೂರು ಅಥವಾ ಮಹಾನಗರ ಪಾಲಿಕೆಯನ್ನಾಗಿ ಮಾಡಿ
ಜಿಲ್ಲೆಯ ಜನರ ಪ್ರಮುಖ ಬೇಡಿಕೆ ಅಂದ್ರೆ ಈ ಜಿಲ್ಲೆಯನ್ನು ನವ ಬೆಂಗಳೂರು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಅಥವಾ ಚನ್ನಪಟ್ಟಣ-ರಾಮನಗರ-ಬಿಡದಿ ಮೂರು ನಗರವನ್ನು ಒಟ್ಟಿಗೆ ಸೇರಿಸಿ ಮಹಾನಗರ ಪಾಲಿಕೆಯನ್ನಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ಜಿಲ್ಲೆಯನ್ನ ಪಾಲಿಕೆ ಮಾಡಿದ್ರೆ ಸಿಲಿಕಾನ್ ಸಿಟಿ ಒತ್ತಡಕ್ಕೆ ಕಡಿವಾಣ ಬೀಳಲಿದೆ. ಜೆಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಅದರಂತೆ ಕಳೆದ 12 ವರ್ಷದಿಂದ ನೆನೆಗುದಿಗೆ ಬಿದ್ದಿರುವ ರಾಜೀವ್ ಗಾಂಧಿ ಆರೋಗ್ಯವಿವಿ, ಹೇಮಾವತಿಯಿಂದ ರಾಮನಗರದ ವೈ.ಜಿ.ಗುಡ್ಡ ಹಾಗೂ ಮಂಚನಬೆಲೆ ಜಲಾಶಯಕ್ಕೆ ನೀರು ಹರಿಸುವುದು, ಶಿಂಷಾ ನದಿಯ ಶಾಶ್ವತ ಕುಡಿಯುವ ನೀರು ಯೋಜನೆ, ನಗರಪ್ರದೇಶದ ಅಭಿವೃದ್ಧಿ ಸೇರಿದಂತೆ ನೂರಾರು ಭರವಸೆಗಳನ್ನ ಈಡೇರಿಸುತ್ತಾರೆಂಬ ಭರವಸೆಯನ್ನ ಇಟ್ಟುಕೊಂಡಿದ್ದಾರೆ.
ಒಟ್ಟಾರೆ ಈ ಬಾರಿ ಯಡಿಯೂರಪ್ಪನವರ ಬಜೆಟ್ ನಲ್ಲಿ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಈ ಬೆಜೆಟ್ನಲ್ಲಾದ್ರೂ ಜಿಲ್ಲೆಯ ಜನರ ಕನಸು ಈಡೇರಲಿ ಎಂಬುದು ನಮ್ಮ ಆಶಯ.