ರಾಮನಗರ : ಕಳೆದ ಮೂರು ತಿಂಗಳಿಂದ ವೈದ್ಯರಿಲ್ಲದೇ ಗ್ರಾಮೀಣ ಪ್ರದೇಶದ ರೋಗಿಗಳು ಪರದಾಡುತ್ತಿದ್ದಾರೆ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ದಿಢೀರ್ ಪ್ರತಿಭಟನೆ ನಡೆಸಿದರು.
ಬೇವೂರು ಗ್ರಾಮದಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಈ ಆಸ್ಪತ್ರೆಗೆ 20ಕ್ಕೂ ಹೆಚ್ಚು ಗ್ರಾಮಗಳಿಂದ ನಿತ್ಯ ನೂರಾರು ಮಂದಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೆ, ಕಳೆದ ಮೂರು ತಿಂಗಳಿನಿಂದ ನಿತ್ಯವೂ ಇಲ್ಲಿಗೆ ಬಂದ ರೋಗಿಗಳು ವಾಪಸ್ಸಾಗುತ್ತಿದ್ದಾರೆ.
ಕೆಲವರು ದೂರದ ಚನ್ನಪಟ್ಟಣಕ್ಕೆ ಹೋಗಬೇಕಿದೆ. ಇದರಿಂದ ಬಡವರು, ಅದರಲ್ಲೂ ವೃದ್ಧರಿಗೆ ನಿತ್ಯವೂ ಕಿರಿಕಿರಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಆರೋಗ್ಯ ಕೇಂದ್ರದಲ್ಲಿದ್ದ ಡಾ. ಶ್ವೇತಾ ತುಂಬ ಚೆನ್ನಾಗಿ ಕೆಲಸ ಮಾಡುತ್ತಾ, ರೋಗಿಗಳ ನೆಚ್ಚಿನ ವೈದ್ಯೆಯಾಗಿದ್ದರು. ಅವರು ಹೆರಿಗೆಗೆಂದು ಮೂರು ತಿಂಗಳ ಹಿಂದೆ ರಜೆ ಹಾಕಿ ಹೋಗಿದ್ದಾರೆ.
ಆದರೆ, ಅವರ ಜಾಗಕ್ಕೆಂದು ಹಾಕಿದ ಬದಲಿ ವೈದ್ಯರು ಕಾಟಾಚಾರಕ್ಕೆ ಕೆಲಸ ಮಾಡುತ್ತಾರೆ. ಅವರು ಒಮ್ಮೆ ಇಲ್ಲಿಗೆ ಬಂದ್ರೆ ಮತ್ತೆ ಇತ್ತ ಸುಳಿವೇ ಇರುವುದಿಲ್ಲ. ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಫೋನ್ ಮಾಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ
ಕೋವಿಡ್ ಸೋಂಕು ದಿನೇದಿನೆ ಉಲ್ಭಣಗೊಲ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಸೂಕ್ತ ವೈದ್ಯರನ್ನು ನೇಮಕ ಮಾಡಲು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇಂದು ಕೂಡ 200 ಮಂದಿಯಷ್ಟು ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಇವರ ಸ್ಥಿತಿ ಕೇಳೋರ್ಯಾರು, ಇವರ ಜೀವಕ್ಕೆ ಬೇಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ನಂತರ ತಾಲೂಕು ಆರೋಗ್ಯಾಧಿಕಾರಿ ಟಿ.ಎಂ. ರಾಜು ಮುಂದಿನ ಸೋಮವಾರದಿಂದ ವೈದ್ಯರನ್ನು ಕಳಿಸುತ್ತೇವೆ ಎಂದು ದೂರವಾಣಿ ಮೂಲಕ ಪ್ರತಿಭಟನಾನಿರತ ಮುಖಂಡರಲ್ಲಿ ಮನವಿ ಮಾಡಿದರು. ಸೋಮವಾರ ವೈದ್ಯರು ಬಾರದಿದ್ದಲ್ಲಿ ಮತ್ತೆ ಹತ್ತಾರು ಗ್ರಾಮಗಳ ಜನರೊಟ್ಟಿಗೆ ಪ್ರಾಥಮಿಕ ಕೇಂದ್ರಕ್ಕೆ ಬೀಗ ಜಡಿಯುವುದಲ್ಲದೇ, ತಮ್ಮ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ, ಪ್ರತಿಭಟನೆ ಹಿಂಪಡೆದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ