ರಾಮನಗರ: ಕನಕಪುರಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಇಂದು ಕರೆ ನೀಡಿದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.
ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬಂದ್‌ಗೆ ಕರೆ ನೀಡಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಮನಗರ ಜನತೆ ಸ್ವಯಂಪ್ರೇರಣೆಯಿಂದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ, ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ನಮಗೆ ಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಇಂದು ಮುಂಜಾನೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡಿದ್ದಾರೆ. ಟೀ ಅಂಗಡಿಗಳು, ಸಣ್ಣ ಪುಟ್ಟ ಹೋಟೆಲ್ಗಳಿಗೆ ಸಹ ಬೀಗ ಹಾಕಿ ಬಂದ್‌ಗೆ ಸಹಕಾರ ನೀಡಿದ್ದಾರೆ. ಇದರ ಜತೆಗೆ ರಾಮನಗರ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಗೂಡಿನ ಮಾರುಕಟ್ಟೆಗಳು ಸಹ ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿವೆ. ಸ್ವಯಂಪ್ರೇರಿತರಾಗಿ ವರ್ತಕರು, ವ್ಯಾಪಾರಿಗಳು, ದಲ್ಲಾಳಿಗಳು ಹಾಗೂ ರೈತರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳು ಸಹ ಬಂದ್ ಬಂಬಲಿಸಿ ರಜೆ ಘೋಷಣೆ ಮಾಡಿದ್ದರೆ, ಸಾರಿಗೆ ಸಂಚಾರ ಸಹ ಸಂಪೂರ್ಣವಾಗಿ ನಿಂತು ನಗರದ ರಸ್ತೆಗಳು ಬಿಕೋ ಎನ್ನುತ್ತಿವೆ.
ಇದನ್ನೂ ಓದಿ: ’’ಅವರಿಗೆ ಏನು ಸಿಗಬೇಕು ಅವರಿಗೆ, ನಮಗೆ ಏನು ಸಿಗಬೇಕೋ ನಮಗೆ‘‘: ಮೆಡಿಕಲ್ ಕಾಲೇಜು ಬಗ್ಗೆ ಡಿಸಿಎಂ ಮಾರ್ಮಿಕ ಮಾತು
ರಸ್ತೆ ತಡೆದು ಪ್ರತಿಭಟನೆ: ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿವೆ. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಹೋರಾಟಗಾರರ ಸಮಿತಿಯ ಸದಸ್ಯರು ಬೆಂಗಳೂರು-ಹಳೆ ಮೈಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೆಎಸ್ಆರ್ಟಿಸಿ ಬಸ್ಗಳಿಗೂ ಪ್ರತಿಭಟನೆ ಬಿಸಿ ತಟ್ಟಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಯಿತು. ಇದಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದರು. ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಸ್ಥಳಾಂತರ ವಿವಾದವೇನು?: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಮೊದಲು ರಾಮನಗರಕ್ಕೆ ಮಂಜೂರಾಗಿತ್ತು. ಆದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ಮೆಡಿಕಲ್ ಕಾಲೇಜನ್ನು ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಸ್ಥಳಾಂತರ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
'ಸ್ಥಳಾಂತರ ಬೇಡ': ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ನಾನೇ ಮೆಡಿಕಲ್ ಕಾಲೇಜಿಗೆ 100 ಕೋಟಿ ರೂ ಹಣ ಕೊಟ್ಟಿದ್ದೆ. ಡಿ.ಕೆ.ಶಿವಕುಮಾರ್ ಆಗ ವೈದ್ಯಕೀಯ ಸಚಿವರಾಗಿದ್ದರು. ಟೆಂಡರ್ ಕೊಟ್ಟಿದ್ದೂ ಕೂಡಾ ಇನ್ನೂ ಜೀವಂತವಾಗಿದೆ. ಆ ಬಳಿಕ ಬಿಜೆಪಿ ಸರ್ಕಾರ ಬಂದು ಕನಕಪುರಕ್ಕೆ ಕೊಟ್ಟಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯಿತು. ಈಗ ನಿಮ್ಮದೇ ಸರ್ಕಾರ ಇದೆ. ನಾನು ಕೊಟ್ಟಿದ್ದ ಆ ಮೆಡಿಕಲ್ ಕಾಲೇಜಿಗೆ ಜೀವಕೊಡಿ. ಆದರೆ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಆಗ್ರಹಿಸಿದ್ದರು.
ಇದನ್ನೂ ಓದಿ: ರಾಜೀವ್ ಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುವುದು ಬೇಡ: ಎಚ್ ಡಿ ಕುಮಾರಸ್ವಾಮಿ