ರಾಮನಗರ: ಯಾವುದೇ ಕ್ಷೇತ್ರಕ್ಕೆ ಸಿಎಂ ಬರುವುದು ಅಭಿವೃದ್ಧಿ ಮಾಡುವುದಕ್ಕೆ ಹೊರತು ರಾಜಕೀಯ ಮಾಡುವುದಕ್ಕೆ ಅಲ್ಲ. ನಾನಿದ್ದ ವೇದಿಕೆಯಲ್ಲಿ ಇಂತಹ ಘಟನೆ ನಡೆದಿರುವುದು ವಿಷಾದನೀಯ. ಘಟನೆಗೆ ಕಾರಣರಾದವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿಯಲ್ಲಿ ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಯಾವುದೇ ಕ್ಷೇತ್ರಕ್ಕೆ ಹೋದ್ರೂ ಕೂಡ ಅಭಿವೃದ್ಧಿ ಕಡೆ ಹೆಚ್ಚು ಚಿಂತನೆ ಇರುತ್ತೆ. ಇಂದಿನ ಕಾರ್ಯಕ್ರಮದ ಬಗ್ಗೆ ಒಂದು ವಾರದಿಂದಲೂ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ಮಾಡಲಾಗಿದೆ. ಎಲ್ಲಾ ಜನಪ್ರತಿನಿಧಿಗಳಿಗೂ ಆಮಂತ್ರಣ ನೀಡಲಾಗಿದೆ. ಯಾರು ಈ ಘಟನೆಗೆ ಕಾರಣ ಎಂಬುದನ್ನು ಜನರೇ ನೋಡಿದ್ದಾರೆ. ಈ ಘಟನೆಗೆ ಆರ್‌ಎಸ್‌ಎಸ್ ಅಥವಾ ಬಿಜೆಪಿಯಾಗಲಿ ಕಾರಣವಲ್ಲ. ಈ ಒಂದು ಘಟನೆ ನಡೆಯಬಾರದಿತ್ತು. ನನ್ನ ಸಮ್ಮುಖದಲ್ಲಿ ನಡೆದಿರುವುದು ವಿಷಾದನೀಯ ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿ: 'ಅಶ್ವತ್ಥ್ ನಾರಾಯಣ್‌ಗೂ ರಾಮನಗರಕ್ಕೂ ಏನ್ ಸಂಬಂಧ?, ಕುಮಾರಸ್ವಾಮಿಯಾದ್ರೂ ಒಂದಷ್ಟು ಕಟ್ಟಡ ಕಟ್ಟಿದ್ದಾರೆ'
ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಈಗಾಗಲೇ ನಾನು ಪ್ರತಿಕ್ರಿಯೆ ನೀಡಿದ್ದೇನೆ. ರಾಜಕೀಯ ಮಾಡಲು ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆಯಿಂದ ಯಾವುದೇ ಉಪಯೋಗ ಇಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಅಶ್ವತ್ಥ್ ನಾರಾಯಣ್, ಜಿಲ್ಲೆಗೆ ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಬಂದಿದ್ದಾರೆ. ನಾನು ಯಾರ ಹೆಸರು ಹೇಳಿ ವೈಯಕ್ತಿಕ ಟೀಕೆ ಮಾಡಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇನೆ ಅಷ್ಟೇ. ಸಿಎಂ ಇರುವ ವೇದಿಕೆಯಲ್ಲಿ ಇಂಥಹದೊಂದು ಘಟನೆ ನಡೆದಿರುವುದು ಮಾತ್ರ ವಿಷಾದನೀಯ ಎಂದರು.