ರಾಮನಗರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಸವನಪುರ ಬಳಿ ಅಂಡರ್ ಪಾಸ್ನಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ವ್ಯತ್ಯಯವಾಗಿದೆ. ಹೆದ್ದಾರಿ ನಿರ್ಮಾಣ ವೇಳೆ ಸ್ವಾಭಾವಿಕ ಹಳ್ಳ ( ನ್ಯಾಚುರಲ್ ವ್ಯಾಲಿ)ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅವೈಜ್ಞಾನಿಕವಾಗಿ ಮುಚ್ಚಿರುವ ಪರಿಣಾಮ ಮಳೆ ನೀರು ನೇರವಾಗಿ ಅಂಡರ್‌ಪಾಸ್ ಬರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಹಾದು ಹೋಗುವ ರಸ್ತೆಯ ಅಂಡರ್ ಪಾಸ್ಗಳಾದ ಶೇಷಗಿರಿಹಳ್ಳಿ, ತಮ್ಮಣ್ಣನದೊಡ್ಡಿ, ಕೆಂಪನಹಳ್ಳಿ, ದ್ಯಾವರಸೇಗೌಡನದೊಡ್ಡಿ ಹಾಗೂ ಬಿಳಗುಂಬ ಅಂಡರ್ ಪಾಸ್ಗಳಲ್ಲೂ ಇದೇ ಅವ್ಯವಸ್ಥೆ ಅನಾವರಣವಾಗಿದೆ. ಬಿಳಗುಂಬ ದಿಂದ ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆಯು ಸಂಪೂರ್ಣ ಜಲಾವೃತವಾಗಿದೆ. ನೀರು ಸರಾಗವಾಗಿ ಹರಿಯದೇ ನಿಂತಲ್ಲಿ ನಿಂತು ವಾಹನ ಸವಾರರು ಪರದಾಡಿದ್ದಾರೆ. ಶೀಘ್ರವೇ ಈ ಅವ್ಯವಸ್ಥೆ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬದಲಿ ಮಾರ್ಗ ವ್ಯವಸ್ಥೆ: ರಾಮನಗರದಿಂದ ಕೆಂಪೇಗೌಡನದೊಡ್ಡಿ ಮೂಲಕ ಬೈಪಾಸ್ನಲ್ಲಿ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಪೊಲೀಸರು ಅನುವು ಮಾಡಿ ಕೊಟ್ಟಿದ್ದಾರೆ. ಆದರೂ ಸಂಗಬಸವನದೊಡ್ಡಿ ಅಂಡರ್ ಪಾಸ್ನಲ್ಲಿ ನಿಂತಿದ್ದ ಭಾರಿ ಪ್ರಮಾಣದ ನೀರಿನಲ್ಲಿಯೇ ವಾಹನಗಳು ಸಂಚರಿಸಿದವು.
ಹಳ್ಳ-ಕೊಳ್ಳಗಳ ಸ್ವರೂಪ ಬದಲು: ಹಳ್ಳ-ಕೊಳ್ಳ, ಕೆರೆ ಕಟ್ಟೆಗಳ ಮೂಲ ಸ್ವರೂಪ ಕಳೆದುಕೊಂಡಿವೆ. ಎಲ್ಲೆಂದರಲ್ಲಿ ಅವುಗಳನ್ನು ಮುಚ್ಚಿರುವುದೇ ಈ ಸಮಸ್ಯೆಗೆ ಮೂಲ ಕಾರಣ. ಸಾರ್ವಜನಿಕ ಆಸ್ತಿಗಳಲ್ಲಿ ಮಣ್ಣು, ಕಲ್ಲು ಅಗೆತ, ಕೆರೆಗಳನ್ನು ಮುಚ್ಚಿ ಹೆದ್ದಾರಿ ರಸ್ತೆ ನಿರ್ಮಾಣ ಮಾಡಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವುದು ಜಗಜ್ಜಾಹೀರಾಗಿದೆ. ಸಾರ್ವಜನಿಕರ ಆಸ್ತಿ ರಕ್ಷಣೆ ಮಾಡಬೇಕಾದ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 23 ವರ್ಷಗಳ ಬಳಿಕ ಕಣ್ವ ಡ್ಯಾಂ ಭರ್ತಿ.. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ಮಟ್ಟ ಹೀಗಿದೆ