ರಾಮನಗರ : ಬೀದಿ ನಾಯಿಗಳ ಹಾವಳಿ ತಪ್ಪಿಸಿ ಎಂದು ಕೇಳುವವರ ನಡುವೆ ಇಲ್ಲೊಬ್ಬರು ಮಹಿಳೆ ಕಳೆದ 5 ವರ್ಷಗಳಿಂದ ಬೀದಿ ನಾಯಿಗಳನ್ನು ಸಂರಕ್ಷಿಸುತ್ತಿದ್ದಾರೆ. ಅಲ್ಲದೇ ಪ್ರತಿ ದಿನ ಬಿಸಿ ಊಟ ಒದಗಿಸುವ ಜೊತೆಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಆರೈಕೆ ಮಾಡುತ್ತಿದ್ದಾರೆ.
ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿರುವ ರಾಧಿಕಾ ರಾಘವಾನ್, ಬೀದಿ ನಾಯಿಗಳ ಆರೈಕೆಯಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಬೀದಿ ನಾಯಿಗಳ ಸ್ಥಿತಿ ಗಮನಿಸಿ ಅವುಗಳ ಆರೈಕೆಗೆ ಮುಂದಾಗಿದ್ದರು.
8 ನಾಯಿಗಳಿಂದ ಪ್ರಾರಂಭವಾದ ಇವರ ಸೇವೆ ಇದೀಗ ಸುಮಾರು 400 ನಾಯಿಗಳಿಗೆ ಪ್ರತಿ ದಿನ ಪ್ರಿಯವಾದ ಮಾಂಸಹಾರ, ಬಿಸಿ ಊಟ, ಹಾಲು, ಬ್ರೆಡ್ ಹಾಕುತ್ತ ಕಾಪಾಡಿದ್ದಾರೆ.
ಪ್ರತಿ ತಿಂಗಳು ಸುಮಾರು 2 ಲಕ್ಷ ರೂ. ಖರ್ಚು ಮಾಡುತ್ತಿರುವ ರಾಧಿಕ ರಾಘವನ್, ಯಾವುದೇ ಬೀದಿನಾಯಿ ಕಂಡರು ಒಂದೆರಡು ದಿನ ಊಟ ನೀಡಿ ನಾಯಿಯೊಂದಿಗೆ ಸಲುಗೆ ಬೆಳೆಸಿಕೊಂಡು ಚಿಕಿತ್ಸೆ ನೀಡುತ್ತಾರೆ. ಬಳಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಬೀದಿನಾಯಿಗಳ ಹಾವಳಿಗೆ ಪರೋಕ್ಷವಾಗಿ ನಿಯಂತ್ರಣ ಕೂಡ ಮಾಡುತ್ತಿದ್ದಾರೆ.
ಬೀದಿನಾಯಿ ಕಂಡರೆ ಹೊಡೆದು ಓಡಿಸುವ ಜನರ ನಡುವೆ ತಿಂಗಳಿಗೆ 2 ಲಕ್ಷ ರೂ. ಖರ್ಚು ಮಾಡಿ ಸಾಕು ನಾಯಿಗೆ ನೀಡುವ ಆರೈಕೆ ಬೀದಿನಾಯಿಗೆ ನೀಡುತ್ತಿರುವ ರಾಧಿಕ ರಾಘವನ್ ಅವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ.. ಎಚ್ಚರ ಯುವಕರೇ ಎಚ್ಚರ...! ಕಾಲ್ ಮಾಡಿ ಬೆತ್ತಲಾಗ್ತಾರೆ, ಆಮೇಲೆ ನಿಮ್ಮ ಕತೆ ಮುಗೀತು!