ರಾಮನಗರ: ಸತತ ಒಂದು ತಿಂಗಳಿನಿಂದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಓಡಾಡಿ ಸುಸ್ತಾಗಿರುವ ರಾಜಕಾರಣಿಗಳು ಈಗ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಚುನಾವಣೆ ಮುಗಿದಿದ್ದು, ಎಲ್ಲಾ ಜಂಟಾಟ ಬಿಟ್ಟು ತಮ್ಮ ಆಪ್ತರು ಮತ್ತು ಕುಟುಂಬದೊಂದಿಗೆ ಕಾಳ ಕಳೆಯುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ರಿಲ್ಯಾಕ್ಸ್ ಮೂಡ್‍ಗೆ ಜಾರಿರುವುದು ಕಂಡು ಬಂತು.
ಕರ್ನಾಟಕ ವಿಧಾನಸಭೆ ಮತದಾನಕ್ಕೆ ತೆರೆ ಬಿದ್ದಿದ್ದು ಮತದಾನದ ಮುಕ್ತಾಯದ ಬಳಿಕ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸ್ಥಳೀಯ ಮುಖಂಡರ ಜೊತೆ ಕನಕಪುರದ ಕೆ.ಎನ್.ಎಸ್. ವೃತ್ತದ ವಾಸು ಹೋಟೆಲ್‍ಗೆ ತೆರಳಿ ಇಡ್ಲಿ ಸವಿದರು. ಬಳಿಕ ಚುನಾವಣೆ ಬಗ್ಗೆ ಸ್ಥಳೀಯರ ಜೊತೆ ಮಾತುಕತೆ ನಡೆಸಿ ಕಾಲ ಕಳೆದರು. ಅದಾದ ಬಳಿಕ ಕನಕಪುರದ ಕೋಡಿಹಳ್ಳಿಯ ನಿವಾಸಕ್ಕೆ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಭೇಟಿ ನೀಡಿ ತಾಯಿ ಗೌರಮ್ಮನವರ ಆಶೀರ್ವಾದ ಪಡೆದರು.
ಮತ್ತೊಂದೆಡೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಿಲ್ಯಾಕ್ಸ್ ಮಾಡಲು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕಳೆದ ರಾತ್ರಿ ಆಪ್ತರ ಜೊತೆ ಬೆಂಗಳೂರಿನಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಮೇ 13 ರಂದು ಮಧ್ಯಾಹ್ನ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಂಗಾಪುರ್ಗೆ ತೆರಳಿದ ಹೆಚ್.ಡಿ.ಕುಮಾರಸ್ವಾಮಿ: ವಿಶ್ರಾಂತಿಗೆ ಜಾರಿದ ಜೆಡಿಎಸ್ ಅಭ್ಯರ್ಥಿಗಳು
ಮತ್ತೊಂದೆಡೆ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತದಾನ ಮುಗಿದ ತಕ್ಷಣ ನಗರದ ಖಾಸಗಿ ಹೋಟೆಲ್ನಲ್ಲಿ ಕಾರ್ಯಕರ್ತರ ಜೊತೆಗೆ ಕಾಫಿ ಕುಡಿಯುವ ಮೂಲ ರಿಲ್ಯಾಕ್ಸ್ ಮಾಡಿದರು.
ಒಟ್ಟಾರೆ ಕಳೆದೊಂದು ತಿಂಗಳಿಂದ ಚುನಾವಣಾ ಭರಾಟೆಯಲ್ಲಿ ಬ್ಯುಸಿಯಾಗಿದ್ದ ರಾಜಕೀಯ ಮುಖಂಡರು ತಮ್ಮ ಆಪ್ತರು ಹಾಗೂ ಕುಟುಂಬಸ್ಥರೊಂದಿಗೆ ಟೈಮ್ ಪಾಸ್ ಮಾಡುತ್ತಿದ್ದಾರೆ.
ರಾಜ್ಯದ ಜನತೆಗೆ ಡಿಕೆಶಿ ಧನ್ಯವಾದ: ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ ಎಲ್ಲ ನಾಗರಿಕರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಧನ್ಯವಾದ ಸಲ್ಲಿಸಿದರು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸಿವೆ. ನಮ್ಮ ಪಕ್ಷ ಈ ಬಾರಿ ಅಧಿಕಾರ ನಡೆಸಲಿದೆ. 141 ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದ ಎಲ್ಲ ಕಾರ್ಯಕರ್ತರು, ನಾಯಕರಿಗೆ ಇದೇ ವೇಳೆ ವಿಶೇಷ ಧನ್ಯವಾದ ಹೇಳಿದ ಡಿಕೆಶಿ, ಪಕ್ಷ ಉತ್ತಮ ಆಡಳಿತ ನೀಡಲಿದೆ ಎಂದು ಹೇಳಿ ಆಪ್ತರನ್ನುದ್ದೇಶಿಸಿ ಮಾತನಾಡಿದರು.
ಇನ್ನೂ, ನಾಡಿದ್ದು ಅಂದರೆ, ಮೇ 13 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಮತದಾನೋತ್ತರ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿಯಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ 2, 3ನೇ ಸ್ಥಾನ ಪಡೆಯಲಿವೆ ಎಂದು ಅಂದಾಜಿಸಲಾಗಿದೆ. ಮತದಾರ ಪ್ರಭುಗಳ ನಿರ್ಣಯ ಏನೆಂಬುದು 13 ರಂದು ಹೊರಬೀಳಲಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ನಮ್ಮವರಿದ್ರೂ ಏನೂ ಮಾಡಿಲ್ಲ, ಜನ ಬದಲಾವಣೆ ಬಯಸಿದ್ದಾರೆ: ಶೆಟ್ಟರ್