ರಾಮನಗರ : ಎಳ್ಳು ಬೆಲ್ಲ ತಿನ್ನಿ ಒಳ್ಳೆ ಮಾತಾಡಿ.. ಇದು ಸಂಕ್ರಾಂತಿ ಹಬ್ಬದ ಜನಜನಿತ ಮಾತು. ಎಳ್ಳು ಬೆಲ್ಲದ ಮಿಶ್ರಣದೊಂದಿಗೆ ಕಬ್ಬಿನ ತುಂಡು ಇಲ್ದಿದ್ರೆ ಹೇಗೆ ಹೇಳಿ. ಇಲ್ಲೊಂದು ಗ್ರಾಮವಿದೆ ಸಂಕ್ರಾಂತಿ ಹಬ್ಬಕ್ಕೆಂದೇ ಸಿಹಿ ಕಪ್ಪು ಕಬ್ಬನ್ನು ಇಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಸಂಕ್ರಾಂತಿ ಬಂತೆಂದರೆ ಸಾಕು ಇಲ್ಲಿನ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ಪ್ರತಿ ಸಂಕ್ರಾಂತಿ ಬಂದಾಗಲೂ ಒಂದು ಕೋಟಿಗೂ ಹೆಚ್ಚು ವಹಿವಾಟು ಇದೊಂದೆ ಗ್ರಾಮದಲ್ಲಾಗುತ್ತದೆ.
ಸಂಕ್ರಾಂತಿ ಬಂದರೆ ಈ ಗ್ರಾಮದ ಕಬ್ಬಿಗೆ ಬೇಡಿಕೆ : ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ನಮಗೆ ತಟ್ಟನೆ ನೆನಪಾಗುವುದು ಎಳ್ಳು ಬೆಲ್ಲ. ಇದರೊಂದಿಗೆ ಕಬ್ಬು ಮರೆಯೋಕೆ ಸಾಧ್ಯನಾ ?. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮ ಸಂಕ್ರಾಂತಿ ಹಬ್ಬಕ್ಕೆಂದೇ ಹೆಸರುವಾಸಿಯಾದ ಪಟಾವಳಿ ಹಾಗೂ ಕಪ್ಪು ಕಬ್ಬನ್ನು ಬೆಳೆಯುವುದರಲ್ಲಿ ಹಿಂದಿನಿಂದಲೂ ಹೆಸರುವಾಸಿಯಾದ ಗ್ರಾಮ. ಈ ಗ್ರಾಮದಲ್ಲಿ ಮಾತ್ರವಲ್ಲದೇ ಸುತ್ತಮುತ್ತ ಗ್ರಾಮಗಳಾದ ಅಬ್ಬೂರುದೊಡ್ಡಿ, ನಾಗವಾರ, ಚಿಕ್ಕೇನಹಳ್ಳಿ, ದಶವಾರ, ಅಬ್ಬೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಕೂಡ ಸಂಕ್ರಾಂತಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಕಬ್ಬಿನಿಂದ ಕೋಟ್ಯಂತರ ವಹಿವಾಟು: ಪಟ್ಲು ಗ್ರಾಮದಲ್ಲಿ ಕಬ್ಬು ಬೆಳೆಯೇ ಗ್ರಾಮದ ಜನರ ಜೀವನಾಧಾರ. ನೆರೆಯ ತಮಿಳುನಾಡು ಬಿಟ್ಟರೆ ರಾಜ್ಯದಲ್ಲಿ ಕಪ್ಪು ಕಬ್ಬು ಹಾಗೂ ಪಟಾವಳಿ ಕಬ್ಬು ಬೆಳೆಯುವುದಕ್ಕೆ ಇಲ್ಲಿಯ ಗ್ರಾಮಗಳು ಹೆಚ್ಚು ಹೆಸರುವಾಸಿಯಾಗಿದೆ. ಅದರಲ್ಲೂ ಸಂಕ್ರಾಂತಿ ಹಬ್ಬದಂದು ಇಲ್ಲಿನ ಕಬ್ಬುಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಬೆಂಗಳೂರು, ಮೈಸೂರು, ರಾಮನಗರ ಹೀಗೆ ನೆರೆಯ ಹಲವು ಜಿಲ್ಲೆಗಳಿಗೆ ಕಬ್ಬು ಮಾರಾಟವಾಗುತ್ತದೆ. ಅಲ್ಲದೇ ಗುಜರಾತ್ನಲ್ಲೂ ರವಾನಿಸಲಾಗುತ್ತದೆ. ಈ ಬಾರಿ ಕಬ್ಬಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ರೈತ ಕುಮಾರ್ ಹೇಳುತ್ತಾರೆ.
ಮಧ್ಯವರ್ತಿಗಳ ಹಾವಳಿ : ಇಲ್ಲೂ ಕೂಡ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಬ್ಬು ಬೆಳೆದ ರೈತನಿಗೆ ನಿಜವಾದ ಬೆಲೆ ಸಿಗುತ್ತಿಲ್ಲ. ರೈತರಿಂದ ಕಡಿಮೆ ಬೆಲೆಗೆ ಕೊಂಡುಕೊಳ್ಳುವ ಮಧ್ಯವರ್ತಿಗಳು ಕಬ್ಬನ್ನು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಕಬ್ಬು ಮಾರಾಟ ಮಾಡುವಾಗಲೂ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ನಿಜವಾದ ಬೆಲೆ ಸಿಗುತ್ತಿಲ್ಲ.
ಸಂಕ್ರಾಂತಿ ವಿಶೇಷ : ಮಕರ ಸಂಕ್ರಾಂತಿ ದೇಶಾದ್ಯಂತ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ಪ್ರತಿ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ಸುಗ್ಗಿಯ ಆರಂಭವನ್ನು ಸೂಚಿಸುತ್ತದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುತ್ತಾ ಮಕರ ರಾಶಿಗೆ ಪ್ರವೇಶಿಸುತ್ತಾನೆ.
ಸಂಕ್ರಾಂತಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರ ವಿಳಕ್ಕು, ಕರ್ನಾಟಕದಲ್ಲಿ ಎಳ್ಳು- ಬೆಲ್ಲದ ಹಬ್ಬ (ಎಳ್ಳು ಬೀರುವುದು), ಗುಜರಾತ್‌ನಲ್ಲಿ ಉತ್ತರಾಯಣ, ಪಂಜಾಬ್‌ನಲ್ಲಿ ಮಾಘಿ, ಉತ್ತರ ಭಾರತದಲ್ಲಿ ಲೋಹ್ರಿ, ಅಸ್ಸೋಂನಲ್ಲಿ ಮಾಘ ಬಿಹು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭೋಗಿ ಎಂಬ ಹೆಸರಲ್ಲಿ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.
ಇದನ್ನೂ ಓದಿ : ಮಕರ ಸಂಕ್ರಾಂತಿ: ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಇಲ್ಲಿವೆ