ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸ್ತಾರಾ? ಒಂದು ವೇಳೆ ಸ್ಪರ್ಧಿಸಿದರೆ ಯಾವ ಕ್ಷೇತ್ರದಿಂದ ಕಣಕ್ಕಿಳಿತಾರೆ ಎಂಬ ಪ್ರಶ್ನೆಗಳಿಗೆ ಇಂದು ಅನಿತಾ ಕುಮಾರಸ್ವಾಮಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ತಮ್ಮ ರಾಮನಗರ ಕ್ಷೇತ್ರವನ್ನು ಪುತ್ರ ನಿಖಿಲ್ ಅವರಿಗೆ ಬಿಟ್ಟು ಕೊಡುವುದಾಗಿ ಇಂದು ಘೋಷಿಸಿದರು. ಈ ಮೂಲಕ ರಾಮನಗರ ಕ್ಷೇತ್ರದಿಂದಲೇ ನಿಖಿಲ್ ಚುನಾವಣಾ ಕಣಕ್ಕೆ ಇಳಿಯುವುದು ಖಚಿತವಾಗಿದೆ.
ಕಾರ್ಯಕರ್ತರು ಶಾಸಕರ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಅಲ್ಲಿ ಕುತಂತ್ರ ರಾಜಕಾರಣ ಮಾಡಿ ನನ್ನ ಮಗನನ್ನ ಸೋಲಿಸಿದರು. ಮುಂದಿನ 2023ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ನನ್ನ ಮಗ ನಿಖಿಲ್ ಕುಮಾರಸ್ವಾಮಿಗೆ ನಿಮ್ಮೆಲ್ಲರ ಆರ್ಶೀವಾದ ಬೇಕು. ನಿಖಿಲ್ ಮುಂದಿನ ಚುನಾವಣೆಯಲ್ಲಿ ನಿಲ್ಲುತ್ತಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಭಾಗವಹಿಸಿದ ವೇಳೆ ಪುತ್ರ ನಿಖಿಲ್ ಸ್ಪರ್ಧೆ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.
ರಾಮನಗರದಲ್ಲಿ ನಿಖಿಲ್ ಅಭ್ಯರ್ಥಿ ಮಾಡಬೇಕೆಂದು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ನಾನು ನಿಖಿಲ್ ಬಗ್ಗೆ ಚಿಂತೆ ಮಾಡ್ತಿಲ್ಲ, ರಾಜ್ಯದ ಜನತೆ ಬಗ್ಗೆ ಚಿಂತೆ ಮಾಡ್ತಿದ್ದೀನಿ. ಈ ಮಾತು ಮೊನ್ನೆ ನಾನೇ ಹೇಳಿದ್ದೆ, ನನಗೆ ರಾಜಕೀಯ ಜನ್ಮಕೊಟ್ಟವರು ತೀರ್ಮಾನ ಮಾಡ್ತಾರೆ ಎಂದಿದ್ದೆ. ಇಲ್ಲಿಯೂ ಸಹ ಕುತಂತ್ರ ರಾಜಕಾರಣ ನಡೆಯಬಹುದು.
ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವನ ಮುಂದಿನ ರಾಜಕೀಯ ಬದುಕು ನಿಮಗೆ ಬಿಟ್ಟಿದ್ದೇನೆ. ಮಂಡ್ಯದಲ್ಲಿ ಕುತಂತ್ರದಿಂದ ಸೋಲಿಸಿದರು. ಈ ಕ್ಷೇತ್ರದಲ್ಲಿ ನಮ್ಮನ್ನ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅನಿತಾಕುಮಾರಸ್ವಾಮಿ ಸವಾಲು ಹಾಕಿದರು.
ರಾಮನಗರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ: ನಿಖಿಲ್ ಹೆಸರು ಘೋಷಣೆ ಆಗ್ತಿದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಾವುಕರಾಗಿ ಮಾತನಾಡಿದ ನಿಖಿಲ್, ನನ್ನ ಹೆಸರು ಘೋಷಣೆ ಮಾಡ್ತಾರೆ ಎಂದು ಅಂದುಕೊಂಡಿರಲಿಲ್ಲ. ಯುವ ಘಟಕದ ರಾಜ್ಯಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಹಿಂದೆ ದೇವೇಗೌಡರ ಪರವಾಗಿ ನಿಂತಿದ್ದೀರಿ, ನಂತರ ಎರಡು ಬಾರಿ ಕುಮಾರಸ್ವಾಮಿ ಅವರ ಪತ ನಿಂತಿದ್ದೀರಿ.
ಕುಮಾರಣ್ಣನನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ಬಹಳ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ಇವತ್ತಿಗೂ ನನ್ನ ಅಭಿಪ್ರಾಯದಲ್ಲಿ ರಾಮನಗರ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಕುಮಾರಣ್ಣ. ನಮ್ಮ ತಂದೆಯ ಹಾಗೆ ಜನರ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡುವುದಾಗಿ ಹೇಳಿ ನಿಖಿಲ್ ಗದ್ಗದಿತರಾದರು.
ಮಾಜಿ ಸಿಎಂ ಹೆಚ್ಡಿಕೆ ಏನು ಹೇಳುತ್ತಾರೆ: ನಾನು ಈ ಮೊದಲೇ ಹೇಳಿದಂತೆ ನಿಖಿಲ್ನನ್ನು ಸ್ಪರ್ಧೆ ಮಾಡಿಸಲು ಇಷ್ಟ ಇರಲಿಲ್ಲ. ಕಳೆದ ಬಾರಿ ಮಂಡ್ಯದಲ್ಲಿ ಕೆಲವು ಕುತಂತ್ರಗಳಿಂದ ಸೋಲಿಸಲಾಯಿತು. ರೈತ ಸಂಘ, ಕೆಲವು ಸಂಘಟನೆಗಳು, ಸ್ಥಳೀಯರ ಕುತಂತ್ರದಿಂದ ಸೋಲಿಸಲಾಯಿತು. ನಿಖಿಲ್ ಎಲ್ಲಿ ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರಿಗೆ ಬಿಟ್ಟಿದ್ದೆ. ನಿಮ್ಮನ್ನ ನಂಬಿ ನಾನು ನಿಖಿಲ್ ನನ್ನು ಸ್ಪರ್ಧೆ ಮಾಡಿಸುತ್ತಿದ್ದೇನೆ. ಮುಂದೆ ಇಲ್ಲಿ ಕೂಡ ಕುತಂತ್ರ ಮಾಡಬಹುದು. ನಿಖಿಲ್ ಕುಮಾರಸ್ವಾಮಿ ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಅವನ ಜೀವನ ರೂಪಿಸುವ ಕೆಲಸ ನಿಮ್ಮದು. ನಿಮ್ಮ ಮನೆಯ ಮಗನಾಗಿ ಅವನನ್ನು ನೀವು ಕೈ ಹಿಡಿಯಬೇಕು ಎಂದು ಹೆಚ್ಡಿಕೆ ಮನವಿ ಮಾಡಿದರು.
ರಾಜಕೀಯ ದಬ್ಬಾಳಿಕೆಯಿಂದ ರಾಮನಗರ ಜನರನ್ನು ಮಣಿಸಲು ಸಾಧ್ಯವಿಲ್ಲ. ಇಲ್ಲಿನ ಜನರನ್ನು ಪ್ರೀತಿ ವಿಶ್ವಾಸದಿಂದ ಮಾತ್ರ ಗೆಲ್ಲಲು ಸಾಧ್ಯ. ನನಗೂ ಕೂಡ ಗೊತ್ತಿರಲಿಲ್ಲ ಅನಿತಾ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
(ಓದಿ: ಶ್ರೀನಿವಾಸ್ ಪ್ರಸಾದ್ ಗಲ್ಲಿ ರೌಡಿಗಳ ರೀತಿ ಮಾತನಾಡಬೇಡಿ: ಎಂಎಲ್ಸಿ ವಿಶ್ವನಾಥ್ )