ರಾಮನಗರ : ಮಾಜಿ ಸಚಿವರು ಹತಾಶರಾಗಿದ್ದಾರೆ. 2018 ರಲ್ಲಿ ಆದ ಪರಿಸ್ಥಿತಿ ಆಗುತ್ತದೆ ಎಂಬ ಆತಂಕ ಅವರಿಗೆ ಸೃಷ್ಟಿ ಆಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಜಿ ಸಚಿವ ಯೋಗೇಶ್ವರ್ ಅವರ ವಿರುದ್ಧ ವಾಗ್ದಾಳಿ ಹರಿಹಾಯ್ದಿದ್ದಾರೆ.
ಚನ್ನಪಟ್ಟಣದ ಕೆಂಗಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಯೋಗೇಶ್ವರ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಪ್ರತಿನಿತ್ಯ ಚರ್ಚೆ ಮಾಡುವುದು ಅನಾವಶ್ಯಕ. ಮಾಜಿ ಸಚಿವರಿಗೆ ಭಯದ ವಾತಾವರಣ ಕಾಡುತ್ತಿದೆ. 2018 ರಲ್ಲಿ ಆದ ಪರಿಸ್ಥಿತಿ ಆಗುತ್ತದೆ ಎಂಬ ಆತಂಕ ಸೃಷ್ಟಿ ಆಗಿದೆ. ಅವರ ಬಗ್ಗೆ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ. ಕಳೆದ ಹದಿನೆಂಟು ವರ್ಷ ಅವರಿಗೆ ಜನ ಆಶೀರ್ವಾದ ಮಾಡಿದ್ದರು. ಆವಾಗ ಯೋಗೇಶ್ವರ್ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ಇನ್ನು, ತಾಲೂಕು ಅಭಿವೃದ್ಧಿ ಮಾಡಲು ಹದಿನೆಂಟು ವರ್ಷ ಬೇಕಿತ್ತಾ. ಕುಮಾರಸ್ವಾಮಿ ನಾಲ್ಕೂವರೆ ವರ್ಷದಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಇದನ್ನು ಯೋಗೇಶ್ವರ್ ಅವರಿಗೆ ಸಹಿಸಲು ಆಗುತ್ತಿಲ್ಲ. ತಾಲೂಕಿನ ಅಭಿವೃದ್ಧಿ ವಿಚಾರವಾಗಿ ನಾವು ಗೊಂದಲ ಮೂಡಿಸುವುದಿಲ್ಲ. ಯಾರು ಬೇಕಾದರೂ ಅಭಿವೃದ್ಧಿ ಮಾಡಲಿ ಎಂದು ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಕೋಲಾರದಲ್ಲಿ ಪಂಚರತ್ನ ರಥಯಾತ್ರೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ತಾಲೂಕಿನಲ್ಲೂ ಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಅದರಲ್ಲೂ ಯಾತ್ರೆಯಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಅತ್ಯಂತ ಯಶಸ್ವಿಯಾಗಿದೆ ಎಂದರು.
ಇನ್ನು, ಜೆಡಿಎಸ್ ಪಕ್ಷ ಸಂಘಟನೆ ವಿಚಾರವಾಗಿ ಮಾತನಾಡಿ, ಜೆಡಿಎಸ್ ನನಗೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ನಾನು ಎಲ್ಲಿ ಸ್ವರ್ಧೆ ಮಾಡಬೇಕು ಎಂಬುದು ಪಕ್ಷಕ್ಕೆ ಬಿಟ್ಟ ತೀರ್ಮಾನ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಎಸ್ಸಿ ಎಸ್ಟಿ ಮಕ್ಕಳ ಹಾಸಿಗೆ ದಿಂಬಿನಲ್ಲೂ ಭ್ರಷ್ಟಾಚಾರ ಮಾಡಿದ್ದರು : ಬೊಮ್ಮಾಯಿ ವಾಗ್ದಾಳಿ