ರಾಮನಗರ: ನಟ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆಗೆ ಸಕಲ ಸಿದ್ಧತೆಗಳು ಬರದಿಂದ ನಡೆಯುತ್ತಿದ್ದು, ಇಂದು ಮದುವೆ ನಡೆಯುವ ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾಸ್ವಾಮಿ ದಂಪತಿ ಭೂಮಿ ಪೂಜೆ ನೆರವೇರಿಸಿದರು.
ನಿಖಿಲ್ ಹಾಗೂ ರೇವತಿ ಮದುವೆಗೆ ಎರಡು ತಿಂಗಳ ಬಾಕಿ ಇದ್ದು, ತಮ್ಮ ಮಗನ ಮದುವೆಯನ್ನು ತಮ್ಮ ರಾಜಕೀಯ ಕರ್ಮಭೂಮಿ ರಾಮನಗರದಲ್ಲಿ ಮಾಡಬೇಕೆಂಬ ಬಯಕೆ ಹೆಚ್.ಡಿ.ಕುಮಾರಸ್ವಾಮಿದ್ದಾಗಿತ್ತು. ಇಂದು ಶುಭ ಗಳಿಗೆಯಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ಹೆಚ್.ಡಿ. ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ರೇವತಿ ತಂದೆ ಮಂಜುನಾಥ್, ತಾಯಿ ಶ್ರೀದೇವಿ ಹಾಗೂ ರೇವತಿ ಸಹೋದರಿ ಅವರು ಭೂಮಿ ಪೂಜೆಯಲ್ಲಿ ಭಾಗವಹಿಸಿದರು. ಜ್ಯೋತಿಷಿ ಹರಿಶಾಸ್ತ್ರಿ ಮಾರ್ಗದರ್ಶನದಲ್ಲಿ ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ, ಗುದ್ದಲಿ ಪೂಜೆ, ಕಳಸ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ಗೋ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು.
ಏಪ್ರಿಲ್ 17ಕ್ಕೆ ವಿವಾಹ:
ನಿಖಿಲ್ ಮತ್ತು ರೇವತಿ ಮದುವೆ ಏಪ್ರಿಲ್ 17ಕ್ಕೆ ನಿಗದಿಯಾಗಿದ್ದು, ರಾಮನಗರ-ಚನ್ನಪಟ್ಟಣ ಮಾರ್ಗ ಮಧ್ಯೆಯಿರುವ ಜನಪದ ಲೋಕದ ಸಮೀಪದಲ್ಲಿರುವ ಸುಮಾರು 54 ಎಕರೆಗೂ ಹೆಚ್ಚಿನ ಜಾಗದಲ್ಲಿ ಮದುವೆ ಕಾರ್ಯಗಳು ಜರುಗಲಿವೆ. ಮದುವೆಗೆ ಯಾವುದೇ ಅಡತಡೆಗಳು ಆಗಬಾರದೆಂದು ಇಂದು ಪೂಜೆ ನೆರವೇರಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮದುವೆಯಲ್ಲಿ ಭಾಗವಹಿಸುತ್ತಾರೆ. ಇದು ನನ್ನ ಜೀವನದಲ್ಲಿ ಮೊದಲ ಶುಭ ಸಮಾರಂಭವಾಗಿದೆ. ಮುಂದೆ ಇಂತಹ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ. ಪಕ್ಷದ ಎಲ್ಲಾ ಕಾರ್ಯಕರ್ತರ ಕುಟುಂಬಗಳಿಗೆ ಆಹ್ವಾನ ನೀಡಿ ಅವರೆಲ್ಲರ ಆಶೀರ್ವಾದ ನನ್ನ ಮಗನಿಗೆ ಸೀಗಬೇಕಿದೆ. ಹಾಗಾಗಿ ಈ ದೊಡ್ಡ ಮಟ್ಟದಲ್ಲಿ ಮದುವೆ ಮಾಡಲು ನಿರ್ಧಾರ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇವತ್ತು ಪೂಜೆ ಮಾಡಿ ಕೆಲಸ ಆರಂಭಿಸಲಾಗಿದೆ. ನಮ್ಮ ಜನರ ಮಧ್ಯೆ ಮದುವೆ ಮಾಡಲು ನಿರ್ಧಿರಿಸಿದ್ದೇನೆ. ನಾಳೆಯಿಂದ ವೇದಿಕೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಅನಿತಾ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.