ರಾಮನಗರ : ನಾನು ಚುನಾವಣೆಗೂ ಮೊದಲೇ ಹೇಳಿದೆ ಸುಳ್ಳು ಅಂತಾ ಇದ್ರೆ, ಅದೇನಾದ್ರೂ ಹುಟ್ಟಿದ್ರೆ ಅದು ಕುಮಾರಸ್ವಾಮಿ ಬಳಿ ಮಾತ್ರ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳೇಶ್ವರ.
ಗಂಟೆಗೊಂದು, ಗಳಿಗೆಗೊಂದು ಸುಳ್ಳು ಹೇಳೋರು ಅವರು, ನಾವಲ್ಲ. ನಮಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ ಎಂದು ನೂತನ ಎಂಎಲ್‌ಸಿ ಎಸ್.ರವಿ ಅವರು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ವಿಧಾನ ಪರಿಷತ್ ಚುನಾವಣೆ ಗೆದ್ದ ಬಳಿಕ ಇದೇ ಪ್ರಥಮ ಬಾರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಅವರ ಮೈತ್ರಿ ವಿರುದ್ಧ ಜನರು ನಮಗೆ ವೋಟು ಹಾಕಿರುವುದು.
ಆದ್ರೆ, ಈ ಚುನಾವಣೆಯಲ್ಲಿ ಜೆಡಿಎಸ್ ಪಾರ್ಟಿಯಲ್ಲಿ ಅವರ ತಾತನಿಂದ ಹಿಡಿದು ಮೊಮ್ಮಗನವರೆಗೂ ನನ್ನನ್ನು ಸೋಲಿಸಲು ಹೋರಾಟ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಜೆಡಿಎಸ್‌ನವರು ನಿಸ್ಸೀಮರು. ಕಾಂಗ್ರೆಸ್‌ನವರಿಗೆ ಸುಳ್ಳು ಹೇಳುವ ಅವಶ್ಯಕತೆ ಎಂದಿಗೂ ಇಲ್ಲ ಎಂದರು.
ಇನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ನಮಗಿಲ್ಲ. ನಾವೇನಿದ್ದರೂ ಬಿಜೆಪಿ ವಿರುದ್ಧವೇ.. ಇತಿಹಾಸ ನೋಡುತ್ತಾ ಹೋದರೆ ಜೆಡಿಎಸ್ ಹೇಗಾದರೂ ದಾಟುತ್ತದೆ. ಇತ್ತ ಬಿಜೆಪಿ ಜೊತೆಯಾದ್ರೂ ಹೋಗುತ್ತೆ.
ಅತ್ತ ಕಾಂಗ್ರೆಸ್ ಜೊತೆಯಾದ್ರೂ ಬರುತ್ತೆ. ನಾವಂತೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದ್ರೆ, ಜೆಡಿಎಸ್ ವಿರುದ್ಧವಾಗಿ ನಮಗೆ ಮತ ನೀಡಿರುವುದಂತೂ ಸತ್ಯ ಎಂದರು.