ರಾಮನಗರ: ಪಫಿನಾಯಿಲ್ ಕುಡಿದು ಕೊಲೆ ಆರೋಪಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೀಗೆಕೋಟೆ ಭದ್ರಾಚಾರಿ ಮೃತ ಕೊಲೆ ಆರೋಪಿ. ಇತ್ತೀಚೆಗೆ ಕನಕಪುರ ಗ್ರಾಮಾಂತರ ಠಾಣೆಯ ಹಳ್ಳಿಮಾರನಹಳ್ಳಿ ಜೆಡಿಎಸ್ ಮುಖಂಡ ನಾಗರಾಜು ಎಂಬಾತನ ಕೊಲೆಯಾಗಿತ್ತು. ಕೊಲೆಯಾದ ನಾಗರಾಜು ಹಾಗೂ ಭದ್ರಾಚಾರಿ ನಡುವೆ ಹಣಕಾಸಿನ ವಿಚಾರದ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ದೂರವಾಣಿ ಕರೆ ಹಾಗೂ ಹಣದ ವಿಚಾರಕ್ಕೆ ಕೊಲೆಯಾಗಿರುವುದು ದೃಢವಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಕೊಲೆ ಆರೋಪ ಮೇಲೆ ಭದ್ರಾಚಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆಯೇ ಪೊಲೀಸ್ ಠಾಣೆಗೆ ಕರೆತಂದು ಈತನ ವಿಚಾರಣೆ ಮಾಡಲಾಗುತ್ತಿತ್ತು. ಆದರೆ ಕಳೆದ ರಾತ್ರಿ ಪೊಲೀಸ್ ಠಾಣೆಯಲ್ಲಿಯೇ ಆರೋಪಿ ಫಿನಾಯಿಲ್ ಕುಡಿದಿದ್ದಾನೆ ಎನ್ನಲಾಗಿದೆ.
ಕೂಡಲೇ ಆತನನ್ನು ಹಾರೋಹಳ್ಳಿಯ ದಯಾನಂದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಭದ್ರಾಚಾರಿ ಇಂದು ಬೆಳಗ್ಗಿನ ಜಾವ ಮೃತಪಟ್ಟಿದ್ದಾನೆ. ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆರೋಪಿಯ ಮನೆಯ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾವಿನ ಪ್ರಕರಣ ಸಿಒಡಿ ತನಿಖೆಗೆ:
ಭದ್ರಾಚಾರಿ ಸಾವಿನ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗಿದೆ. ಠಾಣೆಯಲ್ಲಿಯೇ ಫಿನಾಯಿಲ್ ಕುಡಿದಿದ್ದಾನೆಂಬ ಆರೋಪದ ಮೇರೆಗೆ ಕನಕಪುರ ಗ್ರಾಮಾಂತರ ಠಾಣೆ ಪಿಎಸ್ಐ, ಎಎಸ್ಐ ಹಾಗೂ ಹೆಚ್ಸಿ ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ. ಇದಲ್ಲದೆ ಪ್ರಕರಣ ಗಂಭೀರವಾಗಿರುವುದರಿಂದ ಸಿಒಡಿ ತನಿಖೆಗೆ ವಹಿಸಲಾಗಿದೆ ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದ್ದಾರೆ.